ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ
ಒಂದು ಹಳ್ಳಿಯಿಂದ ಪಟ್ಟಣಕ್ಕೆ ಒಂದು ಕುಟುಂಬ ವಲಸೆ ಬಂದಿತು. ಅದೊಂದು ಅವಿಭಕ್ತ ಕುಟುಂಬವಾಗಿತ್ತು. ಮನೆಯ ಯಜಮಾನ ಮತ್ತು ಆತನ ಮಗ ಇಬ್ಬರೂ ಕೆಲಸ ಮಾಡಿ, ಅದರಿಂದ ಬಂದ ಹಣದಿಂದ ಮನೆಯನ್ನು ನಡೆಸಿಕೊಂಡು ಹೋಗುತಿದ್ದರು. ಮಗ ಸಂಜೆ ಕಾಲೇಜಿಗೆ ಸೇರಿ, ಕಷ್ಟ ಪಟ್ಟು ಬಿಎಸ್ಸಿ, ಬಿಎಡ್ ಮುಗಿಸಿ ಒಂದು ಸರ್ಕಾರಿ ಶಾಲೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಾಗ ಮನೆಯಲ್ಲಿ ಸ್ವಲ್ಪ ನೆಮ್ಮದಿ. ಮಗನ ಅಕ್ಕನಿಗೆ ಮದುವೆಯಾಗಿ, ಆಕೆಯ ಗಂಡ ಮತ್ತು ಅವರ ಎಂಟು ಮಕ್ಕಳ ಜವಾಬ್ದಾರಿ ಕೂಡ ಮನೆಯ ಹಿರಿಯ ಮತ್ತು ಮಗನ ಹೆಗಲ ಮೇಲಿತ್ತು. ಮಗನ ಮದುವೆಯಾಗಿ ಆತನಿಗೂ ಎರಡು ಮಕ್ಕಳಾಗಿ ಅವುಗಳ ಜವಾಬ್ದಾರಿಯೂ ಜೊತೆಯಾಗಿ ಕೂಡಿಕೊಂಡಿತು. ಹೇಗೋ, ಎಲ್ಲರೂ ಜಾಣತನದಿಂದ ಆದಾಯ ಖರ್ಚು ನೋಡಿಕೊಂಡು, ಮನೆಯನ್ನು ಐಷಾರಾಮಿಯಾಗಿ ಅಲ್ಲದಿದ್ದರೂ, ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತಿದ್ದರು. (ಕಥೆಯ ಅನುಕೂಲಕ್ಕೆ, ಕಥೆಯ ಕೇಂದ್ರ ಬಿಂದುವಾದ ಹಿರಿಯರ ಮಗನನ್ನು, ಹೆಸರಿಲ್ಲದೆ, "ಮಗ" ಎಂದೇ ಗುರುತಿಸೋಣ.) ಮನೆಯಲ್ಲಿ ಹೆಚ್ಚು ಓದಿದ್ದು ಮಗನೇ. ಹಾಗಾಗಿ ಮನೆ ಮಕ್ಕಳ ಶಾಲೆ, ಆಸ್ಪತ್ರೆ, ಮತ್ತಿತರ ಸರ್ಕಾರಿ ಸಂಬಂಧಿತ ಅರ್ಜಿಗಳನ್ನು ಭರ್ತಿ ಮಾಡಲು, ಅಂಚೆ ಕಳುಹಿಸಲು ಮಗನ ಅಗತ್ಯ ಅವಶ್ಯಕವಾಗಿತ್ತು. ಹೀಗೆ ಕಾಲ ಕಳೆದು ತೊಂಭತ್ತರ ದಶಕದ ಕೊನೆಯಲ್ಲಿ ಸುಮಾರು ಮಕ್ಕಳು ಓದನ್ನು ಮುಗಿಸಿ, ಕೆಲಸಕ್ಕೆ ಸೇರಿಕೊಂಡರು. ಆದಾಗ್ಯೂ, ಕೆಲವೊಮ್ಮೆ ಅರ್ಜಿಗಳನ್ನು ತುಂಬಲು ಮಗನ ಸಹಾಯ ಕೇಳುತ್ತಿದ್ದರು. ಮಗ...