ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

 ಒಂದು ಹಳ್ಳಿಯಿಂದ ಪಟ್ಟಣಕ್ಕೆ ಒಂದು ಕುಟುಂಬ ವಲಸೆ ಬಂದಿತು. ಅದೊಂದು ಅವಿಭಕ್ತ ಕುಟುಂಬವಾಗಿತ್ತು. ಮನೆಯ ಯಜಮಾನ ಮತ್ತು ಆತನ ಮಗ ಇಬ್ಬರೂ ಕೆಲಸ ಮಾಡಿ, ಅದರಿಂದ ಬಂದ ಹಣದಿಂದ ಮನೆಯನ್ನು ನಡೆಸಿಕೊಂಡು ಹೋಗುತಿದ್ದರು. ಮಗ ಸಂಜೆ ಕಾಲೇಜಿಗೆ ಸೇರಿ, ಕಷ್ಟ ಪಟ್ಟು ಬಿಎಸ್ಸಿ, ಬಿಎಡ್ ಮುಗಿಸಿ ಒಂದು ಸರ್ಕಾರಿ ಶಾಲೆಯಲ್ಲಿ ಉದ್ಯೋಗ ಗಿಟ್ಟಿಸಿಕೊಂಡಾಗ ಮನೆಯಲ್ಲಿ ಸ್ವಲ್ಪ ನೆಮ್ಮದಿ. ಮಗನ ಅಕ್ಕನಿಗೆ ಮದುವೆಯಾಗಿ, ಆಕೆಯ ಗಂಡ ಮತ್ತು ಅವರ ಎಂಟು ಮಕ್ಕಳ ಜವಾಬ್ದಾರಿ ಕೂಡ ಮನೆಯ ಹಿರಿಯ ಮತ್ತು ಮಗನ ಹೆಗಲ ಮೇಲಿತ್ತು. ಮಗನ ಮದುವೆಯಾಗಿ ಆತನಿಗೂ ಎರಡು ಮಕ್ಕಳಾಗಿ ಅವುಗಳ ಜವಾಬ್ದಾರಿಯೂ ಜೊತೆಯಾಗಿ ಕೂಡಿಕೊಂಡಿತು. ಹೇಗೋ, ಎಲ್ಲರೂ ಜಾಣತನದಿಂದ ಆದಾಯ ಖರ್ಚು ನೋಡಿಕೊಂಡು, ಮನೆಯನ್ನು ಐಷಾರಾಮಿಯಾಗಿ ಅಲ್ಲದಿದ್ದರೂ, ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುತಿದ್ದರು.


(ಕಥೆಯ ಅನುಕೂಲಕ್ಕೆ, ಕಥೆಯ ಕೇಂದ್ರ ಬಿಂದುವಾದ ಹಿರಿಯರ ಮಗನನ್ನು, ಹೆಸರಿಲ್ಲದೆ, "ಮಗ" ಎಂದೇ ಗುರುತಿಸೋಣ.)


ಮನೆಯಲ್ಲಿ ಹೆಚ್ಚು ಓದಿದ್ದು ಮಗನೇ. ಹಾಗಾಗಿ ಮನೆ ಮಕ್ಕಳ ಶಾಲೆ, ಆಸ್ಪತ್ರೆ, ಮತ್ತಿತರ ಸರ್ಕಾರಿ ಸಂಬಂಧಿತ ಅರ್ಜಿಗಳನ್ನು ಭರ್ತಿ ಮಾಡಲು, ಅಂಚೆ ಕಳುಹಿಸಲು ಮಗನ ಅಗತ್ಯ ಅವಶ್ಯಕವಾಗಿತ್ತು.


ಹೀಗೆ ಕಾಲ ಕಳೆದು ತೊಂಭತ್ತರ ದಶಕದ ಕೊನೆಯಲ್ಲಿ ಸುಮಾರು ಮಕ್ಕಳು ಓದನ್ನು ಮುಗಿಸಿ, ಕೆಲಸಕ್ಕೆ ಸೇರಿಕೊಂಡರು. ಆದಾಗ್ಯೂ, ಕೆಲವೊಮ್ಮೆ ಅರ್ಜಿಗಳನ್ನು ತುಂಬಲು ಮಗನ ಸಹಾಯ ಕೇಳುತ್ತಿದ್ದರು.


ಮಗ ನಿವೃತ್ತಿಯಾದ. ಪಿಂಚಣಿ ಬರುತ್ತಿದ್ದು, ತನ್ನ ಮಕ್ಕಳಿಗೆ, ಅಕ್ಕನ ಮಕ್ಕಳಿಗೂ ಅವಾಗವಾದ ಹಣವನ್ನು ಕೊಡುತ್ತಿದ್ದ. ಅಭ್ಯಾಸವಲ್ಲವೇ!.


ಕಾಲಾನಂತರ, ಇಂಟರ್ನೆಟ್ ಬಳಕೆ ಹೆಚ್ಚಾಗಿ, ಹೆಚ್ಚು ಕಡಿಮೆ ಪ್ರತಿ ಅರ್ಜಿಯೂ ವಿದ್ಯುನ್ಮಾನದ ಮೂಲಕವೇ ನಡೆಯುತ್ತಿದ್ದು, ಮಗನ ಸಹಾಯವನ್ನು ಕೋರಲು ಯಾರು ಇರಲಿಲ್ಲ. ಮೊಮ್ಮಕ್ಕಳೂ ಸಹ ತಾತನ ಸಹಾಯ ಬೇಕು ಅಂತ ಹೇಳುತ್ತಿರಲಿಲ್ಲ. ಸಾಮನು, ಸರಂಜಾಮು ಇತ್ಯಾದಿಗಳೂ ಕೂಡ ಆನ್ಲೈನ್ ಮೂಲಕ ತರಿಸಿಕೊಳ್ಳುತ್ತಿದ್ದರು.


ಮಗನ ಮನಸಿನಲ್ಲಿ ಏನೋ ಒಂದು ರೀತಿ ಬೇಸರ. ನಾನು ಯಾರಿಗೂ ಬೇಡವಾದನ? ನಾನಿನ್ನು ಕೆಲಸಕ್ಕೆ ಬಾರದವನಾದನ? ಇನ್ನು ನನ್ನ ಅಗತ್ಯ ಏನಿದೆ ಮನೆಗೆ? ಹೀಗೆ...ಒಂದಲ್ಲ, ಎರಡಲ್ಲ.. ಬಗೆ ಬಗೆಯ ಚಿಂತೆಗಳು ಮಗನ ತಲೆಯಲ್ಲಿ ಓಡಾಡಲಾರಂಭಿಸಿದವು. ಇವುಗಳನ್ನು ಮನೆಯ ಇತರರು ಕಾಣದೇ ಹೋದರು.

Comments

Popular posts from this blog

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

ಮಾದೇಶ್ವರನ ಬರಹ