ರೆ...

Rudyard Kipling ಅವರ "IF" ಕವನದ ಕನ್ನಡ ಅನುವಾದ - ಒಂದು ಸಣ್ಣ ಪ್ರಯತ್ನ. - Jnanesha

(Rudyard Kipling's "If" is a timeless poem, that guides us through life's challenges with virtues of patience, resilience, and integrity. It inspires greatness and reminds us to stay true to our values in the face of adversity.)


ಜನರೆಲ್ಲರೂ ಮತಿಯಿಲ್ಲದೆ ನಿನ್ನನ್ನು ದೂಷಿಸುವಾಗ
ನೀನು ಶಾಂತಚಿತ್ತನಾಗಿ ಇರುವುದಾದರೆ
ಎಲ್ಲರೂ ನಿನ್ನನ್ನು ಸಂದೇಹಾತ್ಮಕವಾಗಿ ನೋಡಿದರೂ
ನೀನು ಆತ್ಮವಿಶ್ವಾಸಿಯಾಗಿ ಅವುಗಳನ್ನು ಮನ್ನಿಸಿದರೆ
ಫಲಕ್ಕಾಗಿ ನಿರುತ್ಸಾಹಗೊಳ್ಳದೆ ತಾಳಿದರೆ
ನಿನ್ನ ಬಗ್ಗೆ ಸುಳ್ಳು ಕೇಳಿದರೂ, ನೀನು ಸುಳ್ಳು ಹೇಳದಿದ್ದರೆ 
ನಿನ್ನನ್ನು ಪ್ರೀತಿಸದೆ ಇದ್ದರೂ ನೀನು ದ್ವೇಷದ ಮೊರೆ ಹೊಕ್ಕದಿದ್ದರೆ
ಆದರೂ ನೀ ಸಂಭಾವಿತ ಹಾಗೆ ಕಾಣದಿರು, ಅತಿ ಬುದ್ದಿ ತೋರದಿರು.

ಆಸೆಗಳನ್ನು ಹೊತ್ತುಕೊಂಡರೂ ಸಹ ಅವುಗಳ ಆಳಾಗದಿದ್ದರೆ 
ಯೋಚನೆಗಳನ್ನು ಗುರಿಯಾಗಿಸದೆಯೂ ಯೋಚಿಸಿದರೆ
ನಿನ್ನ ಮಡಿಲಿಗೆ ಗೆಲುವಾಗಲಿ ಸೋಲಾಗಲಿ ಒಲಿದು
ಎರಡನ್ನೂ ನೀ ನಂಬಿಕೊಂಡು ಮೋಸ ಹೋಗದಿದ್ದರೆ
ನೀ ನುಡಿದ ಸತ್ಯವನು ಕಿಡಿಗೇಡಿಗಳು ತಿರುಚಿ 
ಮೂರ್ಖರಿಗೆ ಉಣಬಡಿಸಿದರೂ ನೀ ಶಾಂತಚಿತ್ತನಾಗಿದ್ದರೆ 
ನಿನ್ನನ್ನೇ ಸಮರ್ಪಿಸಿ ರಚಿಸಿದ ಕಾರ್ಯಗಳು ವಿಫಲವಾದಾಗ 
ಧೃತಿಗೆಡದೆ ಮೊದಲಿಂದ ಶುರು ಮಾಡುವ ಹುಮ್ಮಸ್ಸಿರಲಿ 

ನೀ ಕಷ್ಟ ಪಟ್ಟು ಗೆದ್ದು ಗಳಿಸಿದವುಗಳೆನ್ನೆಲ್ಲಾ ಒಂದುಗೂಡಿಸಿ 
ಬೇರೊಂದು ಕಡೆ ಹಾಕಿ ಗೆಲ್ಲಲಾಗದೆ ಎಲ್ಲವನು ಕಳೆದುಕೊಂಡಾಗ 
ಅದರ ಬಗ್ಗೆ ಮರುಗುತ್ತ ಚಿಂತೆಗಳ ದಾಸನಾಗದೇ 
ಮರಳಿ ಪ್ರಯತ್ನವ ಮಾಡು ಎಂಬ ಧೋರಣೆ ನಿನ್ನಲ್ಲಿಟ್ಟುಕೊಂಡರೆ
ಕಾಲ ಮಾಸಿದಂತೆ ಮಾನಸಿಕ-ದೈಹಿಕವಾಗಿಯೂ ಕುಗ್ಗದೆ 
ಬೇರೆಯವರಿಗೆ ಹೊರೆಯಾಗದಂತೆ ಬದುಕಿದರೆ 
ನಿನ್ನ ಬಳಿಯಿದ್ದವೆಲ್ಲವನೂ ಕಳೆದುಕೊಂಡಿದ್ದರೂ 
'ಎದೆಗುಂದದಿರು, ನಾನಿದ್ದೇನೆ' ಎನ್ನುವ ಆತ್ಮಸ್ಥೈರ್ಯವಿರಲಿ  

ಎಲ್ಲರಲ್ಲೂ ಬೆರೆತರೂ ನಿನ್ನ ಸದ್ಗುಣಗಳನ್ನು ಬಿಡದಿದ್ದರೆ 
ಸಿರಿವಂತರ ಸಂಗಡ ಜೀವಿಸಿದರೂ ಸಾಮಾನ್ಯನಂತಿದ್ದರೆ 
ಶತ್ರುಗಳಾಗಲಿ ಮಿತ್ರರಾಗಲಿ ನಿನ್ನನ್ನು ಘಾಸಿಗೊಳಿಸಲಾಗದಿದ್ದರೆ
ಎಲ್ಲರಿಗೂ ನೀನೆ ಆಧಾರವಾಗಿದ್ದರೂ ಮಿತಿಯಲ್ಲಿಟ್ಟುಕೊಂಡಿದ್ದರೆ
ನಿಲ್ಲದ ಕಾಲವನ್ನು ಗೌರವಿಸಿ ಸದುಪಯೋಗ ಮಾಡಿ
ಕೊನೆಯ ಕ್ಷಣದಲ್ಲೂ ಪ್ರಯತ್ನ ಮೀರಿ ಕೆಲಸ ಮಾಡಿದರೆ 
ಪಾವನಗೊಂಡ ಜೀವನ ನಿನ್ನ ಪಾದಕಮಲಗಳಲ್ಲಿ
ಹಾಗು ಎಲ್ಲದಕ್ಕಿಂತ ಮಹತ್ವದ್ದದ್ದು - 
ಪರಿಪೂರ್ಣ ಮನುಷ್ಯ ನೀನಾಗುವೆ ಮಗನೇ!

Comments

Popular posts from this blog

ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

ಮಾದೇಶ್ವರನ ಬರಹ