ಮಾದೇಶ್ವರನ ಬರಹ


ತಲೆಗೆ ಕಟ್ಟಿದ್ದ ಚಿಕ್ಕ ಟವಲ್ ತಗೆದು, ಹಣೆಯಿಂದ ಹರಿದು ಕಣ್ಣು ರೆಪ್ಪೆಯ ಮೇಲೆ ಬಂದ ಬೆವರಿನ ಹನಿಗಳನ್ನು ಒರೆಸಿ, ಮಾದಪ್ಪ ಆಗಸದತ್ತ ನೋಡಿದ. ಎಲ್ಲಿಯೂ ಒಂದು ಸಣ್ಣ ಮೋಡ ಕೂಡ ಇರಲಿಲ್ಲ. ಕಡು ಬೇಸಿಗೆಯ ಕಾಲ. ಸೊಂಟದಲ್ಲಿ ಕಟ್ಟಿಕೊಂಡಿದ್ದ ಪೆಪ್ಪರ್ಮಿಂಟು ಚೀಲದಿಂದ ಒಂದನ್ನು ತೆಗೆದು ಬಾಯಿಗೆ ಹಾಕಿಕೊಂಡ. ಹಾಗೆ ಕೆಳಗೆ ದೃಷ್ಟಿ ಹಾಯಿಸಿದ. ಎತ್ತರದ ಗೋಡೆಗೆ ಮರದ ಗಳಗಳಿಂದ ಕಟ್ಟಿದ್ದ ಸಾರುವೆಯನ್ನು ಹತ್ತಿ ಕೂತಿದ್ದ ಅವನಿಗೆ, ಕೆಳಗೆ ಓಡಾಡುತ್ತಿದ್ದ ಜನರು ಸಣ್ಣದಾಗಿ ಕಂಡರು. ಗೋಡೆ ಮೇಲೆ ಪೈಂಟ್ ಮಾಡೋದು, ಪೋಸ್ಟರ್ ಅಂಟಿಸೋದು ಅವನಿಗೆ ಜೀವನ ನಡೆಸುವ ದಾರಿ. ಈ ರೀತಿ ಎತ್ತರದಲ್ಲಿ ಕೆಲಸ ಮಾಡುವುದು ತನ್ನ ವಯಸ್ಸಿಗೆ ಕ್ಷೇಮವಲ್ಲ ಎಂದು ಆತನಿಗೆ ಬಹಳ ಸಲ ಅನ್ನಿಸಿತ್ತು. ತನ್ನ ಮಗ ದೂರ ಮಾಡಿದಕ್ಕೆ ಕೋಪಿಸಿಕೊಳ್ಳದೆ, ಸ್ವಾಭಿಮಾನಿಯಾಗಿ ಬದುಕುತ್ತಿದ್ದ. ಏನಾದರೂ ಆಗಲಿ, ಇನ್ನೊಬ್ಬರ ಮುಂದೆ ಕೈ ಒಡ್ಡಬಾರದು ಎಂಬ ಅಚಲವಾದ ನಿರ್ಧಾರ.

ಮಾದಪ್ಪನ ಊರು ಆ ಕಡೆ ಹಳ್ಳಿಯೂ ಅಲ್ಲ, ಈ ಕಡೆ ನಗರವೂ ಅಲ್ಲ. ಸುಮಾರು ಐವತ್ತು ಸಾವಿರ ಜನಸಂಖ್ಯೆ ಇದೆ. ಪ್ರಮುಖವಾದ ಎರಡು ರಾಜಕೀಯ ಪಕ್ಷಗಳದ್ದೆ ಕಾರುಬಾರು. ಒಂದು ಜನಬಲ ಪಕ್ಷ, ಇನ್ನೊಂದು ಜನಾದೇಶ ಪಕ್ಷ. ಅವೆರೆಡು ಬೇರೆ ಬೇರೆ ಸಿದ್ದಾಂತವನ್ನು ಅನುಸರಿಸುತಿದ್ದವು. ತನ್ನ ಬುದ್ದಿ ಬಂದಾಗಲಿಂದ, ಮಾದಪ್ಪ ಜನಬಲ ಪಕ್ಷದ ಕಟ್ಟಾ ಬೆಂಬಲಿಗ. ಆ ಪಕ್ಷದ ಸೈದ್ದಾಂತಿಕ ನಿಲುವುಗಳು ಮತ್ತು ನಂಬಿಕೆಗಳು ಇವನದ್ದೇ ಅನ್ನುವಷ್ಟು ಹೋಲುತ್ತಿದ್ದದ್ದೇ ಕಾರಣ. ಚುನಾವಣೆ ಕಾಲದಲ್ಲಿ, ಆ ಪಕ್ಷದ ಗೋಡೆ ಬರಹಗಳು, ಪೋಸ್ಟರ್, ಇತ್ಯಾದಿ ಕೆಲಸಗಳನ್ನು ಬಹಳ ನಿಷ್ಠೆಯಿಂದ, ಪ್ರೀತಿಯಿಂದ ಅಚ್ಚುಕಟ್ಟಾಗಿ ಮಾಡಿ ಕೊಡುತ್ತಿದ್ದ. ಹೆಚ್ಚು ಚೌಕಾಸಿ ಮಾಡದೆ, ಪಕ್ಷದ ಕಚೇರಿಯವರು ಕೊಡುತ್ತಿದ್ದ ಹಣವನ್ನು ಪಡೆಯುತ್ತಿದ್ದ. 

ಊರ ಹೆಬ್ಬಾಗಿಲ ಬಳಿ, ಸಿದ್ದೇಶ್ವರ ಟ್ರಾವೆಲ್ಸ್ ಬಸ್ ಜೋರಾಗಿ ಹಾರ್ನ್ ಹೊಡೆದುಕೊಂಡು ಬಂದಾಗಲೇ ಅವನಿಗೆ ಘಂಟೆ ಮೂರಾಗಿದೆ ಎಂದು ತಿಳಿಯಿತು. ತಾನು ಬರೆಯುತ್ತಿದ್ದ ಅಲ್ಟ್ರಾ ಟೆಕ್ ಸಿಮೆಂಟಿನ ಜಾಹೀರಾತು ಮುಗಿಸಿ, ಬ್ರಷ್ ಮತ್ತು ಬಣ್ಣದ ಡಬ್ಬಗಳನ್ನು ಹಿಡಿದುಕೊಂಡು, ನಿಧಾನವಾಗಿ ಕೆಳಗಿಳಿದ. ಅಲ್ಲೇ ರಸ್ತೆಯ ಮೂಲೆಯಲ್ಲಿದ್ದ ಕ್ಷೌರಿಕನ ಅಂಗಡಿಯಲ್ಲಿ ಡಬ್ಬಗಳು ಮತ್ತು ಬ್ರಷನ್ನು ಇಟ್ಟು, ಮನೆ ಕಡೆ ಹೊರಟ. 

ಮನೆಗೆ ಬಂದು ಹೊರಗಡೆ ಜಗಲಿಯಲ್ಲಿದ್ದ ಕೊಡದಿಂದ ನೀರು ತೆಗೆದುಕೊಂಡು, ಕೈ-ಕಾಲುಗಳ ತೊಳೆದು ಮನೆಯ ಹಟ್ಟಿ ಒಳಗೆ ಬಂದ. ಅಲ್ಲೇ ಪಕ್ಕದಲ್ಲಿ ಹಾಸಿಗೆ ಮೇಲೆ ಮಲಗಿದ್ದ ಹೆಂಡತಿಯ ಕಡೆ ನೋಡಿ "ಹೇಗಿದ್ದೀಯ ರೇಣುಕಾ?" ಎಂದು ಕೇಳಿ ಅಡುಗೆ ಮನೆಯ ಕಡೆ ಹೆಜ್ಜೆ ಹಾಕಿದ. ಅವನಿಗೆ ಗೊತ್ತು, ರೇಣುಕಾ ಮಾತಾಡುವುದಿಲ್ಲ ಎಂದು. ಅವಳಿಗೆ ಲಕ್ವ ಹೊಡೆದು ನಾಲ್ಕು ವರ್ಷ ಕಳೆದು, ಎಷ್ಟೇ ಪ್ರಯತ್ನ ಮಾಡಿದರೂ ಮಾತು ಮತ್ತು ನಡಿಗೆ, ಎರಡೂ ಕಳೆದುಕೊಂಡಿದ್ದವು. ಆದರೂ ಅವನು ಹೆಂಡತಿಯನ್ನು ಮಾತನಾಡಿಸದೆ ಇರುತ್ತಿರಲಿಲ್ಲ. ಅವಳೊಂದಿಗೆ ಮಾತನಾಡಿದರೆ ಅಷ್ಟೇ ಅವನಿಗೆ ಸುಖ , ನೆಮ್ಮದಿ. ಮಗ ತಮ್ಮಿಬ್ಬರನ್ನು ಬಿಟ್ಟು ಹೋದ ಮೇಲೆ ತಾನು ಅವಳಿಗೆ, ಅವಳು ತನಗೆ ಎಂದು ಬಹಳ ಪ್ರೀತಿಯಿಂದ ಆರೈಕೆ ಮಾಡಿಕೊಂಡು ಇದ್ದನು.

ತಟ್ಟೆಗೆ ಅನ್ನ ಸಾರು ಹಾಕಿಕೊಂಡು, ಒಂದು ತುತ್ತು ಅವಳಿಗೆ, ಇನ್ನೊಂದು ಇವನಿಗೆ ಆಗೋ ಹಾಗೆ ತಿನ್ನಿಸಿ, ತಾನೂ ತಿಂದು ತಟ್ಟೆಯನ್ನು ತೊಳೆದು, ಅಡುಗೆ ಮನೆಯ ಸ್ವಚ್ಛಗೊಳಿಸಿ ಹಟ್ಟಿಗೆ ಬಂದು ಕೂತ. ಕಣ್ಣಿಗೆ ನಿದ್ದೆ ಹತ್ತಿ, ಹಾಗೆಯೇ ಕಣ್ಣು ಮುಚ್ಚಿಕೊಂಡ.

ಇದ್ದಕ್ಕಿದ್ದ ಹಾಗೆ ಲೋಟ ಕೆಳಗೆ ಬಿದ್ದ ಶಬ್ದ ಕೇಳಿ ಎಚ್ಚರಗೊಂಡು ತಕ್ಷಣ ರೇಣುಕಾಳ ಕಡೆ ನೋಡಿದ. ಪುನಃ ಲಕ್ವ ಹೊಡೆದು ಒದ್ದಾಡುತ್ತಿದ್ದಳು. ಆಚೆ ಹೋಗುತ್ತಿದ್ದ ಆಟೋವನ್ನು ಕೂಗಿ, ರೇಣುಕಾಳನ್ನು ಎತ್ತಿ, ಆಟೋದಲ್ಲಿ ಕೂರಿಸಿ, ಊರಿನಲ್ಲಿ ಇದ್ದ ಒಂದೇ ಒಂದು ಆಸ್ಪತ್ರೆಗೆ ದಾಖಲಿಸಿದ.

ಡಾಕ್ಟರ್ ಪರಿಶೀಲಿಸಿ, ಅಂದಾಜು ಐವತ್ತು ಸಾವಿರ ಆಗುತ್ತೆ, ಒಂದು ವಾರ ಇಲ್ಲೇ ಇರಬೇಕಾಗುತ್ತದೆ ಎಂದು ಹೇಳಿದಾಗ ಇವನಿಗೆ ಆಕಾಶವೇ ತಲೆ ಮೇಲೆ ಬಿದ್ದ ಹಾಗೆನಿಸಿತು. ಮನೆಯ ಡಬ್ಬಿಗಳನ್ನೆಲ್ಲಾ ತಡಕಾಡಿದರೂ ಅಬ್ಬಬ್ಬಾ ಎಂದರೆ ಒಂದೈದು ಸಾವಿರ ಸಿಗಬಹುದು. 

ಅವರಿವರ ಬಳಿ ಸಾಲ ಕೇಳುವುದಕ್ಕೆ ಮುಜುಗರ. ಈ ಬಾರಿ ಚುನಾವಣೆಗೆ, ಕಚೇರಿಯ ಅಧ್ಯಕ್ಷನ ಮಗ ಬೆಂಗಳೂರಿಂದ ಎಲ್ಲವನ್ನೂ ಫ್ಲೆಕ್ಸ್ ಮಾಡಿಸಿಕೊಂಡು ಬಂದಿದ್ದ. ಹಾಗಾಗಿ ಈ ಬಾರಿ ಬಹಳ ಹೊಡೆತ ಬಿದ್ದಿತ್ತು ಮಾದಪ್ಪನ ಜೇಬಿಗೆ. ಊರಿನಲ್ಲಿ ಬೇರೆ ಕೆಲಸಗಳೂ ಅಷ್ಟೇನೂ ಇರಲಿಲ್ಲ.

ಮನೆಗೆ ಬಂದು ಹುಡುಕಾಡಿ, ಮೂರೂವರೆ ಸಾವಿರ ಜೋಡಿಸಿಟ್ಟ. ಹೊರಗಡೆ ಬಂದು ನಿಂತಾಗ ಅವನಿಗೆ ಕಂಡಿದ್ದು ಎದುರು ಮನೆಯ ಕಾಂಪೌಂಡಿಗೆ ಅಂಟಿದ ಅಲ್ಲಲ್ಲಿ ಹರಿದು ಹೋಗಿದ್ದ ಜನಾದೇಶ ಪಕ್ಷದ ಕಳೆದ ಬಾರಿಯ ಪೋಸ್ಟರ್. ಆ ಪಕ್ಷದ ನಿಲುವುಗಳೊ ಇವನದ್ದಕ್ಕೆ ಪೂರ್ತಿ ವಿರುದ್ಧವಾದವುಗಳು. ಒಂದೆಡೆ ಜೀವವಾಗಿರೋ ರೇಣುಕಾ, ಇನ್ನೊಂದೆಡೆ ಜೀವನಾಡಿ ಆಗಿರೋ ನಿಲುವುಗಳು. ಎರಡೂ ಮುಖ್ಯ ಮಾದಪ್ಪನಿಗೆ. ಆದರೆ ಈಗಿನ ಪರಿಸ್ಥಿತಿ? ಏನೂ ತಿಳಿಯದೇ, ಅವನಿಗೆ ಗೊತ್ತೇ ಆಗದೇ ಅವನ ಕಾಲುಗಳು ಜನಾದೇಶ ಪಕ್ಷದ ಕಚೇರಿಯೆಡೆ ದಾಪುಗಾಲು ಹಾಕುತ್ತಿದ್ದವು. ಅವನ ಕಾಲುಗಳು ಇವನ ಮಾತು ಕೇಳುತ್ತಿಲ್ಲ ಎಂದೆನಿಸಿತು. 

ಊರಿನಲ್ಲಿ ಮಾದಪ್ಪನ ಕೆಲಸ ಬಹಳ ಹೆಸರು ಮಾಡಿತ್ತು. ಅವನಷ್ಟು ಅಚ್ಚುಕಟ್ಟಾಗಿ ಯಾರೊಬ್ಬರೂ ಸಹ ಬರಹಗಳನ್ನು ಪೈಂಟ್ ಮಾಡಲು ಆಗುತ್ತಿರಲಿಲ್ಲ. ಒಬ್ಬರ ಬಣ್ಣ ಬೇಗ ಮಾಸಿದರೆ, ಇನ್ನೊಬ್ಬರ ಕಾಗುಣಿತ ಸರಿ ಇರ್ತಾ ಇರಲಿಲ್ಲ. ಮತ್ತೊಬ್ಬರದ್ದು ಅಕ್ಷರವೇ ಸರಿಯಾಗಿ ಕಾಣುತ್ತಿರಲಿಲ್ಲ. ಹೀಗಾಗಿ ಜನಾದೇಶ ಪಕ್ಷಕ್ಕೂ ಇವನ ಕೈಲಿ ಕೆಲಸ ಮಾಡಿಸಲು ಆಸೆಯಿತ್ತು. 

ಮಾದಪ್ಪ ಕಚೇರಿಯ ಆವರಣಕ್ಕೆ ಹೋಗುತಿದ್ದ ಹಾಗೆಯೇ, ಕಾರ್ಯಕರ್ತನೊಬ್ಬ ನೋಡಿ, ಅಧ್ಯಕ್ಷರನ್ನು ಭೇಟಿ ಮಾಡಿಸಲು ಒಳಗೆ ಕರೆದ. 

ಮಾದಪ್ಪನಿಗೆ ಕೆಲಸ ಕೇಳಲು ಬಹಳ ಇಕ್ಕಟ್ಟು ಆಯಿತು. ಅಧ್ಯಕ್ಷರೇ ಹೇಳಿದರು, "ನೋಡು ಮಾದಪ್ಪ, ಒಂದು ನೂರು ಪೋಸ್ಟರ್ ಬೇಕು, ಮುನ್ನೂರು ಕಡೆ ಗೋಡೆ ಪೈಂಟ್ ಮಾಡಬೇಕು. ಎಲ್ಲಾ ಸೇರಿ ನಲ್ವತ್ತೈದು ಸಾವಿರ ಕೊಡ್ತೀನಿ. ಕೆಲಸ ನಮ್ಮ ರಾಜ್ಯಾಧ್ಯಕ್ಷರಿಗೆ ಹಿಡಿಸಿದರೆ, ಅದರ ಮೇಲೆ ಇನ್ನೂ ಒಂದತ್ತು ಸಾವಿರ ಕೊಡಿಸ್ತೀನಿ." ಮಾದಪ್ಪ ಗೊಂಬೆ ತರ ತಲೆ ಅಲ್ಲಾಡಿಸಿದ.

ಅಲ್ಲಿಂದ ಸೀದಾ ಆಸ್ಪತ್ರೆಗೆ ಬಂದ ಮಾದಪ್ಪ ಡಾಕ್ಟರಿಗೆ ರೇಣುಕಾಳನ್ನು ಸರಿಯಾಗಿ ಉಪಚರಿಸಿ, ಹಣ ಕೇವಲ ಮೂರು ದಿನಗಳಲ್ಲಿ ಕೊಡುವೆ ಎಂದು ಬೇಡಿಕೊಂಡ. ನಂತರ ವಾರ್ಡಿಗೆ ಬಂದು, ರೇಣುಕಾ ಪಕ್ಕ ಕುಳಿತು ತಂದಿದ್ದ ಕಿತ್ತಳೆ ಹಣ್ಣು ಬಿಡಿಸಿ ಅವಳ ಬಾಯಿಗೆ ಕೊಡಲು ಶುರು ಮಾಡಿದ.

ಕೆಲಸದ ದಿನ ೧: 

ಪೋಸ್ಟರ್ಗಳನ್ನು ಪ್ರಿಂಟ್ ಮಾಡಿಸ್ಕೊಂಡು ಬಂದು ಎಲ್ಲೆಲ್ಲಿ ಹೇಳಿದ್ದರು, ಅಲ್ಲೆಲ್ಲ ಅಂಟಿಸಿದ ಮಾದಪ್ಪ. ಇನ್ನು ಗೋಡೆ ಬರಹಗಳು ಬಾಕಿ. ಈ ಗೋಡೆ ಬರಹಗಳು ಒಂದು ರೀತಿ ಸೃಜನಾತ್ಮಕವಾಗಿ, ಜನಬಲ ಪಕ್ಷವನ್ನು ಮೂದಲಿಸುವ ರೀತಿ ಇರಬೇಕು ಎಂಬುದು ಜನಾದೇಶ ಪಕ್ಷದ ಒತ್ತಾಯ. ಕಾರ್ಯಕರ್ತರು ಎಲ್ಲರೂ ಸೇರಿ, ಜನಬಲ ಪಕ್ಷದ ಪ್ರತಿ ನಿಲುವನ್ನು ಖಂಡಿಸುವ, ಪ್ರಾಸಭರಿತ ಸಾಲುಗಳನ್ನು ತಯಾರಿಸಿ ಇಟ್ಟಿದ್ದರು. ಅವನ್ನು ಒಂದು A4 ಶೀಟಿನಲ್ಲಿ ಪ್ರಿಂಟ್ ಮಾಡಿ ಮಾದಪ್ಪನಿಗೆ ಕೊಟ್ಟರು

ಕೆಲಸದ ದಿನ ೨: 

ಮುಂಜಾನೆಯೇ ಗೋಡೆ ಬರಹ ಕೆಲಸ ಶುರು ಮಾಡಿದ. ಮಧ್ಯಾಹ್ನ ಸಾರುವೆ ಹತ್ತಿ ಮೇಲುಗಡೆ  ಬರೆಯುವ, ಮೊದಲು ಕೆಳಗೆ ಬರೆಯೋಣ ಎಂದೆಣಿಸಿ ಬರೆಯಲು ಶುರು ಮಾಡಿದ. ಕಾರ್ಯಕರ್ತರು ಕೊಟ್ಟ ಸಾಲುಗಳ ಓದಿ, ಗೋಡೆ ಮೇಲೆ ಅವನ್ನು ಇಳಿಸುವಾಗ, ಅವನ ಮನದಲ್ಲಿ ಉಂಟಾಗುತ್ತಿದ್ದ ಸುನಾಮಿಯನ್ನು ನಾನು ಎಷ್ಟೇ ವರ್ಣಿಸಿದರೂ, ಬಹುಶಃ ನಮಗ್ಯಾರಿಗೂ ಅದರ ಆಳ ತಿಳಿಯಲಾಗದು. ಅವನಿಗೆ ವಿರುದ್ಧವಾದ ಪ್ರತಿ ಸಾಲುಗಳು. ಅವನಿಗೆ ಸಹ್ಯವಲ್ಲದ ಪದಗಳು. ಹೀಗೆ, ಹಲವಾರು ಮಾನಸಿಕವಾಗಿ ಚುಚ್ಚುವ ಪ್ರಾಸಗಳ ಸಾಲುಗಳು. ಅವನಿಗೆ ಆ ಕ್ಷಣದಲ್ಲಿ ಅನಿಸಿದ್ದು ರೇಣುಕಾ ಬೇಕು ಎಂದಷ್ಟೇ. ಮಧ್ಯಾಹ್ನ ಆಗುತ್ತಾ ಇದ್ದಂಗೆ, ಸಾರುವೆ ಮೇಲೆ ಹತ್ತಿ ಬರೆಯಲು ಶುರು ಮಾಡಿದ್ದ. 

ಸಿದ್ದೇಶ್ವರ ಬಸ್ಸಿನ ಹಾರ್ನ್ ಕೇಳಿಸಿತು. ಅದು ಕ್ಷೀಣವಾಗುತ್ತಿದ್ದ ಹಾಗೆ, ಕೆಳಗಡೆಯಿಂದ ಯಾರೋ ಇವನನ್ನು ಕೂಗುತ್ತಿದ್ದ ಹಾಗೆ ಎನಿಸಿ, ಕೆಳಗೆ ನೋಡಿದ. ಆಸ್ಪತ್ರೆ ಎದುರು ಟೀ ಅಂಗಡಿ ಇಟ್ಟಿದ್ದ ಮಂಜಣ್ಣ ನಿಂತಿದ್ದ. ಕೂಗಿ ಹೇಳಿದ "ಮಾದಪ್ಪ, ನಿನ್ ಹೆಂಡ್ರು ಹೋಗಿಬಿಟ್ಟರು. ಬಿರ್ರನೆ ಬಾ."

ಮಾದಪ್ಪನಿಗೆ ಇಡೀ ಪ್ರಪಂಚ ಖಾಲಿ ಆದಂತೆ ಭಾಸವಾಯಿತು. ಎದುರು ಇದ್ದ ಗೋಡೆ ತನ್ನ ಮೇಲೆ ಬಿದ್ದ ಆಕಾಶದಂತೆ ಅನಿಸಿತು. ತನ್ನ ನಂಬಿಕೆಗಳನ್ನು ಮೂಲೆಗಟ್ಟಿ, ಬರೆದ ಪ್ರತಿ ಸಾಲುಗಳು ಈಟಿಯಂತೆ ಇವನನ್ನು ಘಾಸಿಗೊಳಸುವ ಹಾಗೆ ನೋಡಲಾರಂಭಿಸಿದವು. ಆ ಸಾಲುಗಳೇ ತನ್ನ ರೇಣುಕಾಳನ್ನು ಕೊಂದವೇನೋ ಎಂದು ಕೋಪಗೊಂಡ. ನಿತ್ರಾಣನಾದ. ಕಾಲುಗಳು ನಡುಗಲು ಶುರುವಾಯ್ತು. ಕಪ್ಪು ಬಣ್ಣದ ಡಬ್ಬವನ್ನು ಹಿಮ್ಮುಖವಾಗಿ ಹಿಡಿದು, ಗೋಡೆ ಮೇಲೆಲ್ಲಾ ಹರಡುವಂತೆ, ಸಾರುವೆಯಿಂದ ಜಿಗಿದ. ಹಾಗೆಯೇ ಗೋಡೆ ಮೇಲೆ ಬರೆದ ಸಾಲುಗಳು ಕಪ್ಪುಮಯವಾಗಿ, ಅಕ್ಷರಗಳು ಕಾಣದಂತೆ ಆದವು.

ಧೊಪ್ಪನೆ ಶಬ್ದ ಕೇಳಿ ಜನರೆಲ್ಲ ಸೇರಿದರು. ಮಾದಪ್ಪನ ಆತ್ಮ ಅದಾಗಲೇ ಆಸ್ಪತ್ರೆಯಲ್ಲಿ ಕಾಯುತ್ತಿದ್ದ ರೇಣುಕಾಳ ಆತ್ಮದ ಜೊತೆ ಸೇರಿಕೊಂಡಿತ್ತು.

Comments

Popular posts from this blog

ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ