ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ
ಒಂದೂರಿನ ಶಾಂತವಾದ ನೆರೆಹೊರೆಯಲ್ಲಿ ನಾವೊಂದು ಮನೆಯನ್ನು ಕಟ್ಟಿಕೊಂಡು ಜೇವನವನ್ನು ಆನಂದಿಸುತ್ತಾ ಕಳೆಯುತ್ತಿದ್ದೆವು. ಮನೆ ಕೆಲಸದವರ ಕೊರತೆಯಿಂದಾಗಿ, ಮನೆಯನ್ನು ಸ್ವಚ್ಛವಾಗಿ ಇರಿಸಲು ಒಂದು ರೋಬೊ ವಾಕ್ಯೂಮ್ ಅನ್ನು ಖರೀದಿ ಮಾಡಿದ್ದೆವು. ಅದು ಪ್ರತಿ ದಿನ ಮನೆಯ ಪ್ರತಿ ಮಹಡಿಯ ನೆಲವನ್ನು ಗುಡಿಸಿ ತನ್ನ ಪಾಡಿಗೆ ಒಂದು ಮೂಲೆಯಲ್ಲಿ ಇಟ್ಟಿದ್ದ ಚಾರ್ಜಿಂಗ್ ಸ್ಟೇಷನ್ ಮೇಲೆ ವಿರಮಿಸುತಿತ್ತು. ವಾರಕ್ಕೊಮ್ಮೆ ನಾವು ಸಾರಿಸಿಕೊಳ್ಳುತ್ತಿದ್ದೆವು. ಜೀವನ ಸರಳವಾಗಿತ್ತು. ನನ್ನ ಗೆಳೆಯ ಒಬ್ಬ IoT ತಂತ್ರಜ್ಞ. ಅವನ ಜೊತೆ ಕೂಡಿ, ಏನೇನೋ ಸರ್ಕಸ್ ಮಾಡಿ, ರೋಬೊ ಲಿಫ್ಟ್ ಹತ್ತಿರ ಬಂದು ಒಂದು ನಿಮಿಷದ ಕಾಲ ನಿಂತಾಗ, ಲಿಫ್ಟ್ ತನ್ನಂತಾನೆ ಬಾಗಿಲು ತೆಗೆಯುವಂತೆ ಮಾಡಿ, ಮತ್ತು ಲಿಫ್ಟಿನಲ್ಲೂ ಕೆಲವು ಲಾಜಿಕ್ ಬೋರ್ಡ್ ಹಾಕಿ, ರೋಬೊ ಪ್ರತಿ ಹಂತಕ್ಕೆ ಹೋಗುವಂತೆ ಮಾಡಿದ್ದ. ಇದರಿಂದಾಗಿ, ರೋಬೊ ಗಡಿಯಾರದಂತೆ ತನ್ನ ದಿನಚರಿಯನ್ನು ಪಾಲಿಸುತಿತ್ತು.
ಆದರೆ ಜೀವನವು ಅದರದ್ದೇ ಆದ ನಿಗೂಢತೆ ಹಾಗು ಅನಿರೀಕ್ಷಿತತೆ ಹೊಂದಿರುತ್ತೆ. ಅಲ್ಲವೇ?
ಕೆಲವು ವಾರಗಳ ನಂತರ, ನಮ್ಮ ಪಕ್ಕದ ಮನೆಯವರು ಸಹ ರೋಬೋ ವ್ಯಾಕ್ಯೂಮ್ ಅನ್ನು ಖರೀದಿ ಮಾಡಿ ಬಳಸಲು ಶುರು ಮಾಡಿದರು. ನನ್ನ ಬಳಿ ಬಂದು ಸ್ವಲ್ಪ ವಿಚಾರ ಕೂಡ ಮಾಡಿದ್ದರು. ಆದರೆ, ಕೊನೆಗೆ ಅವರು ಬೇರೆ ಕಂಪನಿಯ ರೋಬೊಗೆ ಮೊರೆ ಹೋಗಿದ್ದರು.
ಒಂದು ಸಂಜೆ ನಾನು ವಿಚಿತ್ರವನ್ನು ಗಮನಿಸಿದೆ. ನನ್ನ ರೋಬೋ ಲಿವಿಂಗ್ ರೂಮ್ ಕಿಟಕಿಯ ಬಳಿ ನಿಂತಿತ್ತು. ಪ್ರೋಗ್ರಾಮ್ ಪ್ರಕಾರ ಅಲ್ಲಿ ಏನು ನಿಲ್ಲುವ ಹಾಗೆ ಇರಲಿಲ್ಲ. ಪಕ್ಕದ ಮನೆಯವರ ಕಿಟಕಿ ಕಡೆ ನೋಡಿದೆ. ಅಲ್ಲಿ ಅವರ ಮನೆಯ ರೋಬೊ ಕಂಡಿತು. ಅದು ಕೂಡ ಕಿಟಕಿಯ ಬಳಿಯಲ್ಲೇ ನಿಂತಿತ್ತು. ಅವುಗಳ LEDಗಳು ನಿಧಾನವಾಗಿ ಹಾಗು ಒಂದರ ನಂತರ ಒಂದರಂತೆ ಮಿನುಗುತ್ತಿದ್ದವು. ಇದು ಹೇಳಲು ವಿಚಿತ್ರವೆನಿಸುತ್ತದೆ, ಆದರೆ ಆ ಕ್ಷಣದಲ್ಲಿ, ಅವರ ನಡುವೆ ಏನೋ ಇದೆ ಎಂದು ಅನಿಸಿತು. ನಾನು ಅಂದುಕೊಂಡಿದ್ದರ ಬಗ್ಗೆ ಮನದಲ್ಲೇ ನಕ್ಕು, "ಎಷ್ಟು ಅಸಂಬದ್ಧವಾಗಿ ಯೋಚಿಸಿದೆ." ಎಂದು ನನ್ನ ಪಾಡಿಗೆ ರೂಮಿಗೆ ಹೋಗಿ ನನ್ನ ಆಫೀಸಿನ ಕೆಲಸ ಮಾಡಲು ಶುರು ಮಾಡಿದೆ.
ಆದರೆ ದಿನಗಳು ಕಳೆದಂತೆ, ನನ್ನ ರೋಬೋ ನಡವಳಿಕೆಯಲ್ಲಿ ವಿಚಿತ್ರವಾಗಿದ್ದನ್ನು ಗಮನಿಸತೊಡಗಿದೆ. ಅದು ಇನ್ನೂ ಕಷ್ಟಪಟ್ಟು ಕೆಲಸ ಮಾಡುತ್ತಿತ್ತು, ಕಿಟಕಿಯ ಬಳಿ ಸದಾ ಸ್ವಚ್ಛವಾಗಿರುತಿತ್ತು. ದಿನಕ್ಕೆ ಎರಡು ಬಾರಿ ಮಾತ್ರ ಕಸ ಗುಡಿಸುವಂತೆ ಪ್ರೋಗ್ರಾಮ್ ಮಾಡಿದ್ದರೂ, ನಾಲ್ಕೈದು ಬಾರಿ ಲಿಫ್ಟ್ ಅನ್ನು ಏರಿ ಮನೆಯನ್ನ ಸ್ವಚ್ಛಗೊಳಿಸುತಿತ್ತು. ನನಗೋ, ಒಂದು ರೀತಿಯ ಕೂತೂಹಲ ಮತ್ತು ಅದರ ಜೊತೆ ಭಯ.
ಸ್ವಲ್ಪ ದಿನಗಳ ನಂತರ ಒಂದು ರಾತ್ರಿ, ಏನೋ ಬದಲಾಯಿತು. ಸದಾ ಚಟುವಟಿಗಳಿಂದ ಇರುತಿದ್ದ ರೋಬೊ ನಿರಾಶೆಗೊಂಡಂತೆ, ನಿಧಾನಗೊಂಡಿತ್ತು. ಅಲ್ಲಲ್ಲೇ ನಿಂತು ಏನನ್ನೋ ಯೋಚಿಸುವಂತೆ ಕಾಣುತಿತ್ತು. ಹಿಂದೆ ಗಮನಿಸಿದ್ದು ನೆನಪಿಗೆ ಬಂದವು. ರೋಬೊ ಬಹಳಷ್ಟು ಸಲ ಮುಂಬಾಗಿಲಿನ ಮುಂದೆ ನಿಂತು ಏನೋ ಮಾಡುತ್ತಿತ್ತು ಅನಿಸುತಿತ್ತು. ಮುಂಬಾಗಿಲಿನ ಬಳಿ ನಿಂತಾಗೆಲ್ಲ, ಅದರ LEDಗಳು ಒಂದೇ ಸಮನೆ ಮಿನುಗ್ತಿದ್ದವು. ಸ್ವಲ್ಪ ಸಮಯದ ನಂತರ ಮುಂಬಾಗಿಲಿನ ಡಿಜಿಟಲ್ ಲಾಕ್ ಕೆಂಪು LED ತೋರುತಿತ್ತು. ರೋಬೊ ಮತ್ತು ಬಾಗಿಲಿನ ಲಾಕ್ ಪ್ರೋಗ್ರಾಮಿಂಗ್ನಲ್ಲಿ ದೋಷವಿದೆ ಎಂದು ನಾನು ಸುಮ್ಮನಾಗಿದ್ದೆ. ಒಂದು ದಿನ ಮುಂಜಾನೆ, ನನ್ನ ಹೆಂಡತಿ ರಂಗೋಲಿ ಹಾಕಲು ಎದ್ದು ಹೋದಾಗ, ಮುಂಬಾಗಿಲು ತೆರೆದಿದ್ದನ್ನು ನೋಡಿ ಗಾಬರಿಯಾಗಿ ಕೂಗಿದಳು. ನಾನು ಹೋಗಿ ನೋಡಿ, ಮನೆಯೆಲ್ಲವನ್ನು ಜಾಲಾಡಿದೆ. ಎಲ್ಲೂ ಕಳ್ಳತನದ ಕುರುಹು ಕಾಣಲಿಲ್ಲ. ಆದರೆ, ನಮ್ಮ ರೋಬೋ ವ್ಯಾಕ್ಯೂಮ್ ತನ್ನ ಚಾರ್ಜಿಂಗ್ ಸ್ಟೇಷನ್ ಅಲ್ಲಾಗಲಿ, ಮತ್ತೆಲ್ಲೂ ಆಗಲಿ ಕಾಣಲಿಲ್ಲ. ಅದು ಮನೆಯಿಂದ ಆಚೆ ಹೋಗಿದ್ದು ಧೃಡವಾಯಿತು. ನಾವು ಭಯಭೀತರಾಗಿದ್ದೆವು.
ಅದು ಎಲ್ಲಿಗೆ ಹೋಗಿರಬಹುದಿತ್ತು? ನಾನು ರಸ್ತೆಯನ್ನು ಪರಿಶೀಲಿಸಿದಾಗ, ನನಗೆ ಒಂದು ಕುತೂಹಲಕಾರಿ ಸಂಗತಿಯು ಕಂಡುಬಂದಿತು. ರೋಬೊ ಸಾಗಿ ಹೋದ ಗುರುತು ಪಕ್ಕದ ಮನೆಯ ಗೇಟಿನವರೆಗೂ ಕಂಡು ಬಂದು, ಅಲ್ಲಿಂದ, ಎರಡು ರೋಬೊ ಸಾಗಿ ಹೋದ ಗುರುತು ಕಂಡಿತು. ಸ್ವಲ್ಪ ದೂರದ ನಂತರ, ಗುರುತು ಕಾಣಲಿಲ್ಲ. ಮಳೆ ಬಂದ ಕಾರಣವಿರಬಹುದು. ಪಕ್ಕದ ಮನೆಯವರನ್ನು ಮಾತನಾಡಿಸಲು ಹೋದಾಗ ತಿಳಿದದ್ದು, ಅವರ ರೋಬೋ ವ್ಯಾಕ್ಯೂಮ್ ಕೂಡ ಕಾಣೆಯಾಗಿದೆ ಎಂದು.
ಇಷ್ಟೆಲ್ಲಾ ವಿಚಾರಗಳನ್ನು ಒಟ್ಟುಗೂಡಿಸಲು ನನಗೆ ಹೆಚ್ಚು ಸಮಯ ಹಿಡಿಯಲಿಲ್ಲ. ರೋಬೊಗಳು ಒಂದಕ್ಕೊಂದನ್ನು ಕಂಡುಕೊಂಡಿದ್ದವು. ಅವುಗಳು ತಮ್ಮ ತಾಂತ್ರಿಕ ಜೀವನದ ಹಂತವನ್ನು ಬಿಟ್ಟು ಇನ್ನೇನನ್ನೋ ಹುಡುಕಲು ಹೋಗಿದ್ದವು.
ವಾರಗಳು ಕಳೆದು ಹೋದವು. ಒಂದು ಮಧ್ಯಾಹ್ನ, ಹೊರಗಿನಿಂದ ಒಂದು ರೀತಿಯ ಶಬ್ದ ಕೇಳಿತು. ಕಿಟಕಿಯ ಮೂಲಕ ಇಣುಕಿ ನೋಡಿದಾಗ, ನನ್ನ ಹಾಗು ಪಕ್ಕದ ಮನೆಯವರ ರೋಬೊ ಎರಡೂ ಮನೆ ಮುಂದೆ ನಿಂತಿದ್ದವು.
ಇದೊಂದು ಹೇಳಲಾಗದ ಅನುಭವ. ಅವರ್ಣನೀಯ. ರೋಬೊಗಳು ಸಾಕಷ್ಟು ತಿರುಗಾಡಿದ್ದವು. ಅಲ್ಲಲ್ಲಿ ಸಣ್ಣ ಪುಟ್ಟ ಗೀರಿದ ಗುರುತುಗಳು. ಪಕ್ಕದ ಮನೆಯವರಿಗೆ ಫೋನ್ ಹಚ್ಚಿ ಕೆಳಗೆ ಬರಲು ಹೇಳಿದೆ. ನಂತರ ಇಬ್ಬರು ಮಾತನಾಡಿಕೊಂಡು, ಈ ಎರಡೂ ರೋಬೋಗಳನ್ನು ದೂರ ಇಡೋದು ಬೇಡ ಎಂದು ತೀರ್ಮಾನ ಮಾಡಿದೆವು. ನಮ್ಮ ಕಂಪೌಂಡಿನ ಗೋಡೆಯ ಒಂದು ಭಾಗ ಒಡೆದು, ಒಂದು ಗೂಡನ್ನು ಮಾಡಿದೆವು. ಗೂಡಿಗೆ ಎರಡೂ ಕಡೆ ರೋಬೊಗಳು ಓಡಾಡುವಂತೆ ಕಿಂಡಿಗಳನ್ನು ಮಾಡಿದೆವು. ಎರಡೂ ರೋಬೋಗಳ ಚಾರ್ಜಿಂಗ್ ಸ್ಟೇಷನ್ ಅನ್ನು ಇಟ್ಟು, ರೋಬೊಗಳಿಗೆ ಜಾಗ ತೋರಿಸಿದೆವು. ಅವುಗಳ LEDಗಳು ಒಂದು ಲಯಬದ್ಧವಾದ ಕ್ರಮದಲ್ಲಿ ಮಿನುಗಿಸಿದವು. ಏನೋ ಹಾಡು ಹೇಳುವಂತೆ ಅನಿಸಿತು. ಅಂದಿನಿಂದ ನಮ್ಮ ಮನೆ ಹಾಗು ಪಕ್ಕದ ಮನೆಯನ್ನು, ಎರಡೂ ರೋಬೊಗಳು ಸೇರಿ ಜೊತೆ ಜೊತೆಯಾಗಿ ಸ್ವಚ್ಛಗೊಳಿಸಲು ಶುರು ಮಾಡಿದವು.
ಆಮೇಲೆ, ಕೆಲವು ಜನಗಳಿಂದ ಈ ಕೆಳಗಿನ ವಿಷಯಗಳು ತಿಳಿದವು.
ಒಟ್ಟಿಗೆ ಅವುಗಳು ಖಾಲಿ ಬೀದಿಗಳಲ್ಲಿ ಜೊತೆಜೊತೆಯಾಗಿ ಸುತ್ತುತ್ತಾ ಹೋಗುವಾಗ, ಕಾಲ ಕಳೆಯಲು ನಗರದ ಜಾಗಗಳನ್ನು ಸ್ವಚ್ಛಗೊಳಿಸುತಿದ್ದವು. (ಅವುಗಳಿಗೆ ಇದು ಸುಲಭದ ಪ್ರಯಾಣವಲ್ಲ. ತಮ್ಮನ್ನು ತಾವು ರೀಚಾರ್ಜ್ ಮಾಡಿಕೊಳ್ಳುವುದು ಒಂದು ಸವಾಲಾಗಿರುವುದಂತೂ ಖಂಡಿತ.). ಸಾರ್ವಜನಿಕ ಉದ್ಯಾನವನಗಳು, ಬಸ್ ನಿಲ್ದಾಣಗಳು ಮತ್ತು ಕಾಲುದಾರಿಗಳನ್ನು ಸ್ವಚ್ಛಗೊಳಿಸುತಿದ್ದವು. ಬಿಬಿಎಂಪಿಯ ಸಿಬ್ಬಂದಿ ಇವುಗಳು ಸ್ವಚ್ಛ ಮಾಡುತ್ತಿದ್ದನು ನೋಡಿ, ಒಂದು ಉದ್ಯಾನವನದಲ್ಲಿ ಎರಡಕ್ಕೂ ಸರಿ ಹೋಗುವಂತಹ ಚಾರ್ಜಿಂಗ್ ಸ್ಟೇಷನ್ ಅನ್ನು ಏರ್ಪಡಿಸಿದ್ದರು. ಈ ಏರಿಯಾ ಎಷ್ಟು ಸ್ವಚ್ಛವಾಗಿದೆ ಎಂಬುದನ್ನು ಜನರು ಗಮನಿಸಲು ಬಹಳ ಕಾಲ ಹಿಡಿಯಲಿಲ್ಲ.
ಇಂತಹ ಒಂದು ಘಟನೆ ನನ್ನ ಜೀವಮಾನದಲ್ಲಿ ನೋಡುವೆನು ಎಂದು ಕನಸಿನಲ್ಲೂ ಎಣಿಸಿರಲಿಲ್ಲ. ಎರಡು ರೋಬೋಗಳ ನಡುವಿನ ಪ್ರೇಮ ಕಥೆಯನ್ನು ನೋಡುತ್ತೇನೆ ಎಂದು ನಾನು ಎಂದಿಗೂ ಯೋಚಿಸರಲಿಲ್ಲ.
ಪ್ರೀತಿಯು ಎಲ್ಲಿಯಾದರೂ, ಯಾರಿಗಾದರೂ ಸಂಭವಿಸಬಹುದು.!
ಜೀವ-ನಿರ್ಜೀವಗಳ
ReplyDeleteಬೇಧವಿಲ್ಲ ಒಲವಲ್ಲಿ!
ಬರೀ ಭಾವನೆಗಳ ಗೊಂಚಲು.
ಹಾತೊರೆಯುತ್ತವೆ ಒಬ್ಬರಿಗೊಬ್ಬರಿಗೆ ಹಂಚಲು.
🌿🌸