ಸಂಗೀತದ ಚರಣ
ಭಾಗ ೧ : ಚಿಗುರು
ಹೆಸರಿಗೆ ತಕ್ಕಂತೆ ತನ್ನ ಜೀವನವನ್ನು ಸುಮಧುರವಾಗಿ ಇರಿಸಿಕೊಳ್ಳಬೇಕೆಂಬ ಆಶಯವಿಟ್ಟುಕೊಂಡಿದ್ದವಳು ಸಂಗೀತ. ಈಗ ತಾನೇ ಎಂಜಿನಿಯರಿಂಗ್ ಪದವಿ ಮುಗಿಸಿ, ಕ್ಯಾಂಪಸ್ ರೆಕ್ರೂಟ್ಮೆಂಟ್ ಮೂಲಕ ಒಂದು ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಮೈಸೂರಿನಿಂದ ಬೆಂಗಳೂರಿಗೆ ಬಂದಾಗ, ಅಣ್ಣ ಜೊತೆಯಲಿ ಬಂದು ಒಳ್ಳೆ ಏರಿಯದಲ್ಲಿ ಪಿ.ಜಿ ಮಾಡಿಕೊಟ್ಟು ಕೈಗೆ ಒಂದಷ್ಟು ಸಾವಿರ ಕೊಟ್ಟು ಹೋಗಿದ್ದನು. ಅಪ್ಪನ ಮುದ್ದು ಮಗಳಾಗಿ, ಅಣ್ಣನ ತುಂಟು ತಂಗಿಯಾಗಿ ಇದ್ದ ಅವಳನ್ನು, ಅಮ್ಮನ ಕೊರತೆ ಬರದಿರುವಷ್ಟು ಚೆನ್ನಾಗಿ ನೋಡಿಕೊಂಡಿದ್ದರು. ಅಣ್ಣನಿಗೆ ಆಗಲೇ ಮದುವೆಯ ವಯಸ್ಸು ಮೀರಿದ್ದು ಇನ್ನೂ ಕಾಯುವಂತೆ ಇರಲಿಲ್ಲ. ಇವಳ ಮದುವೆಗೆಂದು ಕಾಯುತ್ತಿದ್ದರು. ಇವಳು ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದಾಗ, ಅಪ್ಪ ಮತ್ತು ಅಣ್ಣನಿಗೆ ಇಷ್ಟವಿರಲಿಲ್ಲ. ಆದರೂ, ಭವಿಷ್ಯದ ದೃಷ್ಟಿಯಿಂದಲೂ, ಅವಳು ಸ್ವತಃ ತನ್ನ ಕಾಲಿನ ಮೇಲೆ ನಿಲ್ಲಬೇಕು ಎಂದೂ ಇಬ್ಬರು ಒಪ್ಪಿದ್ದರು. ಮತ್ತು ವರನು ಬೇಗ ಸಿಗಬಹುದು ಎಂಬ ಲೆಕ್ಕಾಚಾರವೂ ಇತ್ತು.
ಹೆಬ್ಬಾಳದಲ್ಲಿರುವ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಒಂದು ಎಂ.ಎನ್.ಸಿ ಯಲ್ಲಿ ಕೆಲಸ. ಕೈ ತುಂಬಾ ಸಂಬಳ. ಸಾಂಸ್ಕೃತಿಕ ನಗರದಿಂದ ಬಂದ ಸಂಗೀತಳಿಗೆ, ಸದಾ ಗಿಜಿಗಿಡುತಿದ್ದ ಮತ್ತು ಬಿಡುವಿಲ್ಲದ ಬೆಂಗಳೂರಿನ ಜೀವನ ಒಗ್ಗುವಷ್ಟರಲ್ಲಿ ಎರಡು ತಿಂಗಳುಗಳ ಕಾಲ ಕಳೆದು ಹೋಯಿತು. ಟೆಕ್ ಪಾರ್ಕಿನ ಎದುರುಗಡೆ ಏರಿಯದಲ್ಲೇ ಪಿ.ಜಿ ಇದ್ದುದ್ದರಿಂದ ಯಾವುದೇ ದ್ವಿಚಕ್ರವಾಗಲಿ, ಮತ್ತೊಂದಾಗಲಿ ಅವಶ್ಯಕತೆ ಇರಲಿಲ್ಲ. ಬೆಳಗ್ಗೆ ಎದ್ದು, ಸ್ನಾನ, ಪೂಜೆ ಮಾಡಿ ರೂಮ್ ಮೇಟಿನ ಜೊತೆ ತಿಂಡಿ ತಿಂದು, ರಸ್ತೆಯಲ್ಲಿ ಹೊಸದಾಗಿ ಮಾಡಿದ್ದ ಸ್ಕೈವಾಕ್ ಮೂಲಕ ಮಾನ್ಯತಾ ಒಳ ಹೊಕ್ಕುತ್ತಿದ್ದಳು.
ಸ್ಕೈವಾಕ್ ಮೂಲಕ ಬಂದಿಳಿದ ಮೇಲೆ ಅಲ್ಲಿ ಸೆಕ್ಯೂರಿಟಿ ಗಾರ್ಡ್, ಬರುವವರ ಐ.ಡಿ ಪರಿಶೀಲಿಸಿ ಒಳ ಬಿಡುತ್ತಿದ್ದರು. ಇವಳು ಪ್ರತಿದಿನ ಒಂದೇ ಸಮಯಕ್ಕೆ ಆಫೀಸಿಗೆ ಹೋಗುತಿದ್ದು, ಅಲ್ಲಿರುತಿದ್ದ ಸೆಕ್ಯೂರಿಟಿ ಗಾರ್ಡ್ ಮುಖ ಪರಿಚಯ ಇತ್ತು. ಮೊದಮೊದಲು ಇವಳ ಐ.ಡಿ ಕೇಳುತ್ತಿದ್ದವ, ಸ್ವಲ್ಪ ದಿನಗಳ ನಂತರ ಕೇಳುವುದನ್ನು ಬಿಟ್ಟಿದ್ದ. ಅಂದಿನಿಂದ ಅವನ ಮುಖ ಇವಳ ಮನದಲ್ಲಿ ಉಳಿದುಕೊಂಡಿತ್ತು. ಹೆಚ್ಚು ಕಡಿಮೆ ತನ್ನದೇ ವಯಸ್ಸಿನವನು ಎಂದು ಊಹಿಸಲು ಕಷ್ಟವಾಗಿರಲಿಲ್ಲ ಸಂಗೀತಳಿಗೆ. ಸ್ಫುರದ್ರೂಪಿ ಚಹರೆ, ವ್ಯಾಯಾಮನೋ, ಯೋಗಾನೋ ಮಾಡಿದಂತಹ ಮೈಕಟ್ಟು, ಸದಾ ಒಳ್ಳೆ ಇಸ್ತ್ರಿ ಹಾಕಿದ ಬಟ್ಟೆ, ಮಾಸದಂತಹ ಕಿರು ನಗು, ಇವೆಲ್ಲವನ್ನೂ ಇತ್ತೀಚಿಗೆ ಗಮನಿಸತೊಡಗಿದ್ದಳು. ಅವನು ತನ್ನ ಪಾಳಿ ಮುಗಿಸಿ, ಅಲ್ಲೇ ಸಹದ್ಯೋಗಿಗಳ ಜೊತೆ ಮಾತನಾಡುತ್ತಿದ್ದನು. ಬಹಳ ಸಲ, ಆ ಸರ್ವೀಸ್ ರಸ್ತೆಯಲ್ಲಿ ಇದ್ದ ಬಸ್ ಸ್ಟಾಪಿನಲ್ಲಿ ಬರುತ್ತಿದ್ದ ಇಳಿ ವಯಸ್ಸಿನ ವಯೋವೃದ್ಧರಿಗೆ ರಸ್ತೆ ದಾಟಲು, ಇಲ್ಲ ಅವರಿಗೆ ಬಸ್ ಹತ್ತಿಸಲು, ಇಳಿಸಲು ಸಹಾಯ ಮಾಡುತಿದ್ದ. ಒಮ್ಮೊಮ್ಮೆ ಸಂಜೆ ಹೊತ್ತು ಆಫೀಸಿನಿಂದ ಬಂದ ಮೇಲೆ, ಬೇಸರ ಕಳೆಯಲು ಸ್ಕೈವಾಕ್ ಮೇಲೆ ಹೋಗುತ್ತಿದ್ದಳು. ಅಲ್ಲಿಂದ ಅವನ ಚಟುವಟಿಕೆಗಳನ್ನೆಲ್ಲ ಗಮನಿಸಿದ್ದಳು. ದಿನೇದಿನೇ ಅವನ ಬಗ್ಗೆ ಕುತೂಹಲ ಹೆಚ್ಚಾಯಿತು.
ಅಂದು ಬೆಳಗ್ಗೆ ಸ್ಕೈವಾಕ್ ಇಂದ ಇಳಿದು ಬರುವಾಗ, ಅವನು ಎಂದಿನಂತೆ ಬರುವವರ ಐ.ಡಿ ಪರಿಶೀಲಿಸುತ್ತಿದ್ದ. ಏನಾದರೂ ಆಗಲಿ, ಇವತ್ತು ಮಾತನಾಡಿಸಬೇಕು ಎಂದು ಮನದಲಿ ಅಂದುಕೊಂಡಳು. ಹತ್ತಿರ ಬಂದಾಗ, ದೈರ್ಯದಿಂದ "May I know your name, please?" ಎಂದಳು. ಆತ, "Sure, why not. I'm Charana" ಎಂದು ಉತ್ತರಿಸಿದಾಗ, ಅವಳ ಮನದಲ್ಲಿ ಕುತೂಹಲ ಇನ್ನೂ ಹೆಚ್ಚಾಯಿತು. ಹೌದು, ಬೆಂಗಳೂರಿನಲ್ಲಿ ಇಂಗ್ಲಿಷ್ ಬರುವುದು ಸರ್ವೇ ಸಾಮಾನ್ಯ. ಆದರೆ ಅವನ ಮಾತಿನಲ್ಲಿ ಇದ್ದ ಆತ್ಮವಿಶ್ವಾಸ, ಅತ್ಯುತ್ತಮ ಉಚ್ಚಾರಣೆ ಇವಳಲ್ಲಿ ಅವನ ಬಗ್ಗೆ ಆಸಕ್ತಿ ಸಹಜವಾಗಿ ಹೆಚ್ಚಿತು. ಇವಳು, "I'm Sangeetha" ಎಂದು ಸಣ್ಣ ನಗೆ ಕೊಟ್ಟು ಆಫೀಸಿಗೆ ಹೋದಳು. ಅವನ ಹೆಸರು ಅವಳಿಗೆ ಬಹಳ ಹಿಡಿಸಿತ್ತು.
ಭಾಗ ೨ : ಹೂವು
ಒಂದು ಸಂಜೆ ತನ್ನ ಸ್ನೇಹಿತೆಯೊಂದಿಗೆ ತನಿಸಂದ್ರದಲ್ಲಿ ಇರುವ ಎಲಿಮೆಂಟ್ಸ್ ಮಾಲಿಗೆ ಸಿನೆಮಾ ನೋಡುವುದಕ್ಕಾಗಿ ಹೋಗಿದ್ದಳು. ಅಲ್ಲೇ ಊಟ ಮುಗಿಸಿ, ಕೈ ಗಡಿಯಾರ ನೋಡಿಕೊಂಡಾಗ ಘಂಟೆ ಹನ್ನೊಂದುವರೆ ಆಗಿತ್ತು. ಅಷ್ಟೇನೂ ಭಯವಿಲ್ಲದ ರಸ್ತೇ ಎಂದು, ಪಿ.ಜಿ ಗೆ ನಡೆದುಕೊಂಡೇ ಹೋಗುವ ಎಂದು ಇಬ್ಬರೂ ನಾಗವಾರ ಜಂಕ್ಷನ್ ಕಡೆ ಹೆಜ್ಜೆ ಹಾಕಿದರು. ಹಿಂದಿನಿಂದ ಯಾರೋ ಹಿಂಬಾಲಿಸುತ್ತಿರುವಂತೆ ಭಾಸವಾಗಿ, ಹಿಂದುರುಗಿ ನೋಡಿದಾಗ, ಅಪರಿಚಿತರಿಬ್ಬರು ಇವರ ಕಡೆಯೇ ನೋಡುತ್ತಾ ದಾಪುಗಾಲು ಹಾಕುತ್ತಾ ಬರುತಿದ್ದರು. ಅವರನ್ನು ನೋಡಿದರೆ ಒಳ್ಳೆಯ ಅಭಿಪ್ರಾಯ ಬರುವಂತಿರಲಿಲ್ಲ. ಭಯ ಪಟ್ಟು, ಇಬ್ಬರು ತಮ್ಮ ನಡಿಗೆಯ ವೇಗವನು ಹೆಚ್ಚು ಮಾಡಿದರು. ಹಿಂದೆಯಿಂದ "ಸಂಗೀತ ಮ್ಯಾಮ್, ಹಲೋ ಮ್ಯಾಮ್" ಎಂದು ಯಾರೋ ಕೂಗಿದಂತಾಗಿ, ನೋಡಿದಳು. ಮಾಲ್ ಕಡೆ ಇಂದ ಓಡುತ್ತಾ ಬರುತಿದ್ದ ಚರಣ!. ಹತ್ತಿರ ಬರುತ್ತಿದ್ದ ಹಾಗೆ, ಹಿಂಬಾಲಿಸುತ್ತಾ ಇದ್ದ ಇಬ್ಬರು ಅಲ್ಲಿಯೇ ಗಲ್ಲಿ ಒಳಗೆ ಹೋಗಿಬಿಟ್ಟರು. ಚರಣ ಬಂದು "ಏನಿಲ್ಲ ತಪ್ಪು ತಿಳಿಯಬೇಡಿ. ನಾನು ನಿಮ್ಮನ್ನು ಮಾಲ್ ಒಳಗೆ ನೋಡಿದೆ. ಯಾರೋ ಇಬ್ಬರು ನಿಮ್ಮನ್ನು ಮಾಲ್ ಒಳಗಡೆ ಇಂದನು ಹಿಂಬಾಲಿಸುತ್ತಿದ್ದು, ಯಾಕೋ ಅನುಮಾನ ಬಂದು, ಕೂಗಿದೆ. ಬನ್ನಿ, ನಾನೂ ಮಾನ್ಯತಾ ಕಡೆಯೇ ಹೋಗುತ್ತಿದ್ದೇನೆ" ಅಂದು, ಮೂವರೂ ಒಟ್ಟಿಗೆ ನಡೆಯುತ್ತಾ ಹೋದರು. ಪಿ. ಜಿ. ಹತ್ತಿರ ಬಂದಾಗ, ಚರಣ ಗುಡ್ ನೈಟ್ ಹೇಳಿ ತನ್ನ ಪಾಡಿಗೆ ಹೊರಟು ಹೋದ.
ಬೆಳಗ್ಗೆ ಎದ್ದ ಕೂಡಲೇ ಸಂಗೀತಾಳ ನೆನಪಲ್ಲಿ ಇದ್ದದ್ದೇ ಹಿಂದಿನ ರಾತ್ರಿಯ ಘಟನೆ. ಚರಣ ಎಷ್ಟು ವಿನಯಶೀಲ, ಇನ್ನೊಬ್ಬರ ಪರಿಸ್ಥಿತಿಗೆ ಹೊಂದಿಕೊಂಡು ಸಹಾಯ ಮಾಡುತ್ತಾನೆ, ಚೆನ್ನಾಗಿ ಕೂಡ ಇದ್ದಾನೆ, ಬಹುಶಃ ವಿದ್ಯಾವಂತ ಕೂಡ ಇರಬಹುದು, ಎಂದೆಲ್ಲಾ ಯೋಚನಾಲಹರಿ ಹರಿಯಲಾರಂಭಿಸಿತು. ಅವಳಿಗೆ ಗೊತ್ತಾಗದೆ ಅವನ ಬಗ್ಗೆ ಅವಶ್ಯಕತೆಗಿಂತ ಹೆಚ್ಚಾಗಿಯೇ ಆಸಕ್ತಿ ಶುರುವಾಗಿತ್ತು. ಈಗೀಗ ಅವಳಿಗೆ ಬೆಳಗ್ಗೆ ಆಫೀಸಿಗೆ ಹೋಗಲು ಅತೀವ ಹುಮ್ಮಸ್ಸು. ಬೇಗ ಬೇಗನೆ ರೆಡಿ ಆಗುತ್ತಿದ್ದವಳು, ಇವಾಗ ಸ್ನಾನ, ತಿಂಡಿ ಆದಮೇಲೆ ಬಹಳ ಕಾಲ ಕನ್ನಡಿಯ ಮುಂದೆ ನಿಲ್ಲುತ್ತಿದ್ದಳು. ಮುಂಗುರುಳು ಚೆನ್ನಾಗಿ ಸುರುಳಿ ಸುತ್ತುವಂತೆ ಕೂಡ ಮಾಡಿಕೊಂಡಿದ್ದಳು.
ಅವಳ ಮ್ಯಾನೇಜರ್ ಟೀಮ್ ಅವರನ್ನೆಲ್ಲ ಕರೆದು WFH ಆಯ್ಕೆ ಇದೆ. ಹೊಸ ಕ್ಲೈಂಟ್ ಬಂದಿದ್ದು, ಅದರ ಟೀಮಿಗೆ ಜಾಗ ಬೇಕಾಗಿದೆ. ಹಾಗಾಗಿ ನಮ್ಮ ಟೀಮಿಗೆ WFH ಕಂಪಲ್ಸರಿ ಮಾಡಿದ್ದಾರೆ. ಆದರೂ ತಿಂಗಳಿಗೊಮ್ಮೆ ಒಬ್ಬೊಬ್ಬರು ಬರಬಹುದು ಎಂದು ಹೇಳಿದ. ಸಂಗೀತಳಿಗೆ ಆಫೀಸಗೆ ಬರಬೇಕೆಂಬ ಹುಚ್ಚು. ಪಿ.ಜಿ ಯಲ್ಲಿ ಕೆಲಸ ಮಾಡುವುದಕ್ಕೆ ಬೋರು ಹಾಗೂ ತನ್ನ ಕ್ಯೂಬಿಕಲ್ ಕಿಟಕಿಯಿಂದ ಚರಣ ಕಾಣುತಿರುತ್ತಾನೆ. ಹೀಗಾಗಿ ಮ್ಯಾನೇಜರ್ ಬಳಿ ಕಾಡಿಬೇಡಿ ತಾನು ಪ್ರತಿ ದಿನವೂ ಬರಲು ಒಪ್ಪಿಗೆ ಪಡೆದಳು.
ಇದೇ ಯೋಚನೆಯಲ್ಲಿ ಪ್ಯಾಂಟ್ರಿ ಅಲ್ಲಿ ಕೂತು ಕಾಫಿ ಹೀರುವಾಗ, ಇತ್ತೀಚಿಗೆ ತನಗೆ ಚರಣನ ಬಗ್ಗೆ ಹೆಚ್ಚು ಜ್ಞಾಪಕ ಬರ್ತಿದೆ ಎಂದು ಅನಿಸಿತು. ನೋಡುವುದಾದರೆ, ಅವನಿಗಿಂತ ಚೆನ್ನಾಗಿರುವ ಮತ್ತು ಸಂಬಳ ಪಡೆಯುವವರು ತನ್ನ ಸಹದ್ಯೋಗಿಗಳಲ್ಲೇ ಇದ್ದಾರೆ. ಆದರೂ ಯಾಕೆ ತನಗಿನ್ನೂ ಯಾರ ಮೇಲೆಯೂ ಗಮನ ಬಂದಿಲ್ಲ? ಸಂಗೀತಕ್ಕೆ ಚರಣ ಇದ್ದರೇನೆ ಅರ್ಥ. ಚರಣ ಬೇಕಲ್ಲವೇ ಎಂಬ ತುಂಟ ಯೋಚನೆ ಹಾದು ಹೋಯಿತು.
ಸರಿ, ಏನಾದರೂ ಆಗಲಿ, ಅವನ ಬಗ್ಗೆ ತಿಳಿದುಕೊಳ್ಳಬೇಕು ಎಂದು ತೀರ್ಮಾನಿಸಿ ಪುನಃ ತನ್ನ ಕ್ಯೂಬಿಕಲ್ ಕಡೆ ಹೋದಳು. ಸೆಕ್ಯುರಿಟಿ ಆಫೀಸಿಗೆ ಫೋನ್ ಮಾಡಿ, ತಾನು ಒಂದು ಎನ್.ಜಿ.ಓ ಇಂದ ಮಾತಾಡುತ್ತಿರುವುದಾಗಿ ಹೇಳಿ, ತಮ್ಮ ಎನ್.ಜಿ.ಓ ಗೆ ಚರಣ ಎಂಬುವವರು ಡೊನೇಷನ್ ಕೊಟ್ಟಿದ್ದು, ಅವರ ನಂಬರ್ ಮಿಸ್ ಆಗಿದೆ, ದಯವಿಟ್ಟು ಕೊಡಿ ಅಂದಾಗ, ಸೆಕ್ಯೂರಿಟಿ ಆಫಿಸಿನವರು ಅವನ ನಂಬರ್ ಕೊಟ್ಟರು. ಇವಳು ನಂಬರ್ ಅನ್ನು ಸೇವ್ ಮಾಡಿಕೊಂಡ ತಕ್ಷಣ ನೋಡಿದ್ದು ಅವನು ವಾಟ್ಸಾಪ್ ನಲ್ಲಿ ಇದ್ದಾನ ಎಂದು. ಹೌದು, ಅವಳು ಎಣಿಸಿದಂತೆ ಮತ್ತು ಆಶಿಸಿದಂತೆ ವಾಟ್ಸಾಪ್ ನಲ್ಲಿ ಇದ್ದ. ಅವನ ಇನ್ಫೋ ನೋಡಿದಾಗ ಅವನ ಪೂರ್ಣ ಹೆಸರು ಹಾಕಿತ್ತು. ಚರಣ ಪರಮೇಶ ಮೈಸೂರು ಎಂದಿತ್ತು. ಕೂಡಲೇ ಫೇಸ್ಬುಕ್ ಚೆಕ್ ಮಾಡಿದಳು. ಅವಳ ಅದೃಷ್ಟೇವೇನೋ, ಫೇಸ್ಬುಕ್ ಪ್ರೊಫೈಲ್ ಕೂಡ ಕಾಣಿಸಿತು. ಆತ "Studying MSc (Mathematics)" ಎಂದು ಹಾಕಿದ್ದ. ಮನದಲ್ಲಿ ಬಹಳ ಖುಷಿ ಆಯಿತು ಅವಳಿಗೆ. ಅರಿವಿಲ್ಲದಂತೆ ಅವಳ ತಲೆಗೆ ಹೊಳೆದದ್ದು "ಪರ್ವಾಗಿಲ್ಲ, ವಿದ್ಯಾವಂತ... ಅಪ್ಪ, ಅಣ್ಣನನ್ನು ಒಪ್ಪಿಸಬಹುದು". ಆ ಯೋಚನೆ ಬಂದ ತಕ್ಷಣ ಒಂದು ರೀತಿಯ ನಾಚಿಕೆಯೇನೋ ಆಯಿತು. ಅದರ ಜೊತೆ ನಾನೇನಾದರೂ ತಪ್ಪು ಎಸಗುತ್ತಿದ್ದೀನ ಎಂದೂ ಅನಿಸಿತು. ಇನ್ನಷ್ಟು ತಿಳಿಯಬೇಕು ಎಂದು, ಪ್ರೊಫೈಲ್ ನೋಡತೊಡಗಿದಳು. ಚರಣನ ಫೇಸ್ಬುಕ್ ಅತಿ ಹೆಚ್ಚು ಪೋಸ್ಟ್ ಗಳನ್ನು ಹೊಂದಿರಲಿಲ್ಲ. ಅಬ್ಬಬ್ಬಾ ಎಂದರೆ ವಾರಕ್ಕೊಂದು. ಯಾವುದೇ ಆಡಂಬರ, ತೋರಿಕೆಗಳಿಲ್ಲದ ಪೋಸ್ಟುಗಳು. ಒಳ್ಳೇ ವಿಚಾರಗಳನ್ನು ಪೋಸ್ಟ್ ಮಾಡುತಿದ್ದ. ತನ್ನ ಕುಟುಂಬದ ಗ್ರೂಪ್ ಫೋಟೋಗಳನ್ನೂ ಕೂಡ ಹಾಕಿದ್ದ..."ಅಪ್ಪ, ಅಮ್ಮ ಮತ್ತು ತಂಗಿ" ಎಂದು ಕೆಲವು ಕಡೆ ಕ್ಯಾಪ್ಷನ್ ಕೊಟ್ಟಿದ್ದ. ಅವರ ನೋಡಿದಾಗ, ಬಹಳ ನಾಜೂಕು ಹಾಗೂ ಮರ್ಯಾದಸ್ತ ಮನೆತನ ಎಂದು ಖಾತ್ರಿ ಆಯಿತು. ಹಾಗೆಯೇ ಒಂದು ಪೋಸ್ಟಿನಲ್ಲಿ ನಂಜನಗೂಡಿನಲ್ಲಿ ಒಂದು ಸುಂದರ ಮನೆಯನ್ನು ಕಟ್ಟಿದ್ದು, ಅದರ ಗೃಹಪ್ರವೇಶದ ಫೋಟೋಗಳನ್ನು ಹಾಕಿದ್ದ. ಸಾಂಪ್ರದಾಯಿಕ ಉಡುಗೆ ತೊಟ್ಟು ಪೂಜೆ ಮಾಡುತಿದ್ದ ಫೋಟೋ ನೋಡಿ ಮನದೊಳಗೆ ಖುಷಿಯಾಗಿತ್ತು. ಪ್ರೇಮಕ್ಕೆ ಇವೆಲ್ಲ ಬೇಕ ಎಂದು ಒಂದು ಕ್ಷಣ ಅನಿಸಿದರೂ, ಪ್ರೇಮ ಪೂರ್ಣವಾಗಿ ಕುರುಡು ಎನಿಸಬಾರದು ಎಂದು ತನ್ನನ್ನು ತಾನೇ ಸಮಜಾಯಿಷಿಕೊಂಡಳು. ನಾಳೆ ಅವನ ಬಳಿ ತನ್ನ ಪ್ರೇಮ ಯಾಚನೆ ಮಾಡಬೇಕು ಎಂದು ನಿರ್ಧಾರ ಮಾಡಿದಳು.
ಪ್ರೀತಿ ಹೂವಿನಿಂದ ಹಣ್ಣಾಗುವುದಕೆ ಸಜ್ಜಾಯಿತು.
ಭಾಗ ೩ : ಹಣ್ಣು
ಬೆಳಗ್ಗೆ ಬೇಗನೆ ಎದ್ದವಳು ಸ್ನಾನ, ಪೂಜೆ ಮುಗಿಸಿ, ಅಪ್ಪನಿಗೆ ಫೋನ್ ಹಚ್ಚಿ ಮಾತನಾಡಿದಳು. ಅಣ್ಣನ ಕೂಡ ಮಾತಾನಾಡಿದಳು. ಅವನಿಗೆ ಯಾವುದಾದರೂ ಮದುವೆಯ ಪ್ರಸ್ತಾಪ ಬಂದಿದೆಯಾ ಎಂದು ಕೇಳಿದಳು. ಹೌದು ಬಂದಿವೆ, ನಿನ್ನ ಮದುವೆಯಾಗಲಿ ಮೊದಲು ಎಂದು ರೇಗಿಸಿದ. ಇಬ್ಬರೂ ಮಾತು ಮುಗಿಸಿದ ನಂತರ, ಪಿ.ಜಿ.ಯ ಡೈನಿಂಗ್ ಹಾಲಿಗೆ ಬಂದು ತಿಂಡಿ ಮುಗಿಸಿದಳು. ರೆಡಿ ಆಗಿ ಆಚೆಗೆ ಬಂದು ನಿಂತವಳು, ಪುನಃ ರೂಮಿಗೆ ಹೋಗಿ ಮತ್ತೊಮ್ಮೆ ಕನ್ನಡಿಯ ಮುಂದೆ ನಿಂತು ತನ್ನನ್ನು ನೋಡಿಕೊಂಡಳು. ಎಲ್ಲ ಒಳ್ಳೆದಾಗುತ್ತದೆ ಎಂದುಕೊಂಡು ಆಫೀಸಿಗೆ ಹೊರಟಳು.
ಸ್ಕೈವಾಕ್ ಮೇಲೆ ಸೆಕ್ಯುರಿಟಿ ಗೇಟಿನ ಕಡೆ ನೋಡುತ್ತಾ ನಡೆದವಳಿಗೆ, ಚರಣ ಕಾಣದೆ ಇದ್ದದ್ದು ಆಶ್ಚರ್ಯವಾಯಿತು. ತಾನು ಬಂದ ಸುಮಾರು ಆರು ತಿಂಗಳುಗಳಿಂದ, ಇದುವರೆಗು ಅವನು ಅಲ್ಲಿ ಇಲ್ಲದೇ ಇದ್ದ ಒಂದು ದಿನವೂ ಇಲ್ಲ. ಇವತ್ತೇ ಹೀಗೆ ಆಗಬೇಕಾ ಎಂದು ಕೊಂಡು, ಅಲ್ಲೇ ಸ್ಕೈವಾಕ್ ಮೇಲೆ ನಿಂತುಕೊಂಡಳು. ಸುಮಾರು ಹೊತ್ತಾದರೂ ಅವನು ಬರಲಿಲ್ಲ. ಆಫೀಸಿಗೆ ಹೋಗಲು ಬೇಸರವಾಗಿ, ಪುನಃ ರೂಮಿಗೆ ಬಂದು ಕೂತಳು. ಹೇಗಿದ್ದರೂ WFH ಇದೆ. ಒಳ್ಳೇದು ಆಯ್ತು ಎಂದು ಕೆಲಸ ಮಾಡಲು ಲ್ಯಾಪ್ಟಾಪ್ ತೆರೆದಳು.
ಮುಂದಿನ ದಿನವೂ ಇದೆ ರೀತಿ ಆಯಿತು. ಏನಾಗಿದೆ ಎಂದು ಯೋಚನೆಯಲ್ಲಿ ಮುಳುಗಿದಳು. ಅವನಿಗೆ ವಾಟ್ಸಾಪ್ ಮಾಡೋಣ ಎಂದು ನೋಡಿದರೆ ಪ್ರೊಫೈಲ್ ಫೋಟೋ, ಇನ್ಫೋ ಎಲ್ಲ ಬದಲಾಗಿದೆ. ಅಲ್ಲಿ ಇನ್ನೊಬ್ಬ ಸೆಕ್ಯುರಿಟಿಯ ಮುಖ ಕಂಡಿತು. ಬಹುಶಃ ಫೋನ್ ನಂಬರ್ ಇವನದ್ದಲ್ಲ, ಸೆಕ್ಯೂರಿಟಿ ಆಫೀಸಿನವರು ಕೊಟ್ಟಿದ್ದಾರೆ ಎಂದು ಮತ್ತೆ ಚಿಂತೆಗೀಡಾದಳು. ಫೇಸ್ಬುಕ್ ನೋಡಬೇಕೆಂಬ ಉಪಾಯ ಹೊಳೆಯಲೇ ಇಲ್ಲ. ಇದೇ ಅಲ್ಲವೇ ವಿಧಿಯಾಟ! ಎಲ್ಲೆಲ್ಲೋ ಓಡುವ ಬುದ್ದಿ, ಬೇಕೆಂದಾಗ ಓಡುವುದಿಲ್ಲ.
ಹೀಗೆ ಸುಮಾರು ಎರಡು ವಾರ ಕಳೆಯಿತು. ಅವನ ಪತ್ತೆಯೇ ಇಲ್ಲ. ಅದಾಗಲೇ ಅತ್ತ ಪಿಜಿ ಯಲ್ಲಿ ಬೋರು ಹೊಡೆದು, ಇತ್ತ ಚರಣ ಕಾಣದೆ ಹೋದ ವ್ಯಥೆಗಳ ಮಧ್ಯೆ ಇವಳ ಮನಸು ಬಹಳ ಕೆಟ್ಟು ಹೋಗಿತ್ತು. ಹೀಗೆ ಮುಂದುವರೆದರೆ ತನ್ನ ಆರೋಗ್ಯದಲ್ಲಿ ತೊಂದರೆ ಆಗುವುದೆಂದು ಎನಿಸಿ, ಕೂಡಲೇ ಅಣ್ಣನಿಗೆ ಫೋನ್ ಹಚ್ಚಿದಳು. WFH ಕೊಟ್ಟಿರುವ ವಿಷಯ ಹೇಳಿ, ಪಿಜಿ ಖಾಲಿ ಮಾಡಿ ಮನೆಗೆ ಬರುವುದಾಗಿ ಹೇಳಿದಳು. ಹಾಗೂ ಅಣ್ಣನಿಗೆ ಮುಂದಿನ ದಿನ ಬೆಳಗ್ಗೆ ಕಾರನ್ನು ತರುವುದಾಗಿ ಹೇಳಿದಳು. ಅದಾದ ಮೇಲೆ, ಮ್ಯಾನೇಜರ್ ನಂಬರಿಗೆ ಫೋನ್ ಮಾಡಿ, ನಾಳೆಯಿಂದ ತನ್ನ ಊರಿನ ಮನೆಯಿಂದ WFH ಮಾಡುವೆನು ಎಂದು ತಿಳಿಸಿದಾಗ, ಮ್ಯಾನೇಜರ್ ಹೋಗುವ ಮುನ್ನ ಆಫೀಸಿಗೆ ಬಂದು ಅವಳ ಡೆಸ್ಕ್ ಅನ್ನು ಕ್ಲಿಯರ್ ಮಾಡಲು ಹೇಳಿದ.
ಭಾಗ ೪ : ಕಾಯಿ
ಮರುದಿನ ಎದ್ದು, ರೆಡಿ ಆಗಿ, ತುಂಬಿದ ಹೃದಯ ಮತ್ತು ಭಾರವಾದ ಹೆಜ್ಜೆಗಳ ಹಾಕುತ ಸ್ಕೈವಾಕ್ ಮೇಲೆ ಬಂದಳು. ಇವತ್ತಾದರೂ ಇದ್ದಾನ ಎಂದು ನೋಡಿದಳು. ಅವನಿಲ್ಲ. ಮತ್ತದೇ ಬೇಸರ. ಹೊಸ ಸೆಕ್ಯೂರಿಟಿ ಗಾರ್ಡ್ ಇವಳ ಐಡಿ ಚೆಕ್ ಮಾಡಿ ಒಳಗೆ ಬಿಟ್ಟ. ಆಫೀಸಿನ ಲಿಫ್ಟ್ ಹೊಕ್ಕು, ತನ್ನ ಆಫೀಸಿನ ಮಹಡಿ ನಂಬರ್ ಒತ್ತಿದಳು. ಆಫೀಸಿನ ಒಳಗೆ ಬಂದಾಗ ಅವಳ ಟೀಮ್ ಕೂತಿದ್ದ ಜಾಗದಲ್ಲಿ ಹೊಸಬರು ಕೂತಿದ್ದರು. ಯಾವುದೋ ಸ್ಟ್ಯಾಟಿಸ್ಟಿಕ್ಸ್ ರೀಸರ್ಚ್ ಕ್ಲೈಂಟ್ ಬಂದಿದ್ದಾರೆ, ಅವರಿಗೆ ದತ್ತಾಂಶ ಮಾಡಿಕೊಡುವಂತಹ ಪ್ರೊಜೆಕ್ಟ್ ಅಂತ ಮ್ಯಾನೇಜರ್ ಹೇಳಿದ್ದು ಜ್ಞಾಪಕ ಬಂತು. ಅದಕ್ಕೇ ತನ್ನ ಡೆಸ್ಕ್ ಕ್ಲಿಯರ್ ಮಾಡಲಿಕ್ಕೆ ಹೇಳಿದ್ದಾರೆ ಅಂತ ಅಂದುಕೊಂಡು, ತನ್ನ ಡೆಸ್ಕಿನ ಕಡೆ ಹೋದಳು.
ಅಲ್ಲಿ ಹೋದ ಅವಳಿಗೆ ಅವಳ ಡೆಸ್ಕ್ ಕಡೆ ನೋಡಿ ಹುಚ್ಚಾಗಿ ಕುಣಿಯುವಂತೆ ಆಗಿತ್ತು. ಪಕ್ಕದಲ್ಲಿ ಚರಣ! ನೋಡಿದರೆ ಲ್ಯಾಪ್ಟಾಪ್ ಇಟ್ಕೊಂಡವನು ಕೆಲಸ ಮಾಡುತ್ತಾ ಇದ್ದಾನೆ. ಇವಳಿಗೆ ಏನೆಂದು ಅರ್ಥ ಆಗಲು ಕಷ್ಟ ಆಯಿತು. ಮಾತನಾಡಲು ಬಾಯಿ ತೆಗೆದರೂ ಪದಗಳು ಬರುತ್ತಾ ಇರಲಿಲ್ಲ.ಅಲ್ಲಿಯೇ ಇದ್ದ ನೀರನ್ನು ಕುಡಿದು, ಚರಣನ ಬಳಿ ಬಂದು ನಿಂತಳು. ಇವಳನ್ನು ನೋಡಿ ನಿಂತ ಅವನು "ಓಹ್, ಸಂಗೀತ ಮ್ಯಾಮ್. ಗುಡ್ ಮಾರ್ನಿಂಗ್. ನನ್ನ MSc ಮುಗಿದು ಸುಮಾರು ತಿಂಗಳುಗಳು ಆಗಿತ್ತು. Statisticsನಲ್ಲಿ ಮೇಜರ್ ಮಾಡಿದ್ದೆ. ಇಲ್ಲಿ ಕೆಲಸ ಮಾಡುತಿದ್ದ ಅರುಣ್ ಅನ್ನುವವರು ಹಾಗೆ ಇಲ್ಲಿಯೇ ಪರಿಚಯವಾಗಿತ್ತು. ಅವರು ನಿಮಗೂ ಮ್ಯಾನೇಜರ್ ಅಂತೆ. ಅವರು ನಾನು statistics ಪರಿಣಿತ ಎಂದು ತಿಳಿದಾಗ, ಈ ಹೊಸ ಪ್ರಾಜೆಕ್ಟ್ ಬಗ್ಗೆ ಹೇಳಿ, ನನ್ನ CVಯನ್ನು ಕ್ಲೈಂಟ್'ಗೆ ಕೊಟ್ಟಿದ್ದರು. ಎರಡು ವಾರದ ಹಿಂದೆ ಇಂಟರ್ವ್ಯೂ ಆಗಿ ಸೆಲೆಕ್ಟ್ ಆಗಿದ್ದೆ. ಊರಿಗೆ ಹೋಗಿ ಬಂದು, ಮೊನ್ನೆ join ಆದೆ. ನಿಜ ಹೇಳಬೇಕೆಂದರೆ ನಿಮ್ಮನ್ನು ನೋಡಿದ ಕ್ಷಣದಿಂದಲೇ ನಿಮ್ಮ ಬಗ್ಗೆ ಪ್ರೀತಿ, ಗೌರವ, ಪ್ರೇಮ ಎಲ್ಲವೂ ಆಗಿತ್ತು. ಆದರೆ ನನ್ನ ಕೆಲಸ ಕೇವಲ ಸೆಕ್ಯೂರಿಟಿ ಗಾರ್ಡ್ ಆಗಿದ್ದ ಕಾರಣ ಏನನ ಹೇಳಲಿ ಎಂಬ ಅಳುಕಿತ್ತು. ಆದರೆ ಈ ಕೆಲಸ ಸಿಕ್ಕಾಗ, ನೀವು ಸಿಕ್ಕಿದ ಕೂಡಲೇ ಹೇಳಿಬಿಡಬೇಕು ಎಂದುಕೊಂಡಿದ್ದೆ. ನನ್ನ ಅದೃಷ್ಟ, ಇವತ್ತು ಕೈಗೂಡಿತು." ಎಂದಾಗ ಅವಳಿಗೆ ಸ್ವರ್ಗ ಇನ್ನೇನು ಕೈಗೆ ಏಟುಕುತಿದೆ ಅನ್ನಿಸಿತು.
ವಾಪಾಸು ಉತ್ತರ ಕೊಡುವುಷ್ಟರಲ್ಲಿ, ಹಿಂದಿನಿಂದ ಅವಳ ಮ್ಯಾನೇಜರ್ "ಓಹ್ ಸಂಗೀತ, ಡೆಸ್ಕ್ ಕ್ಲಿಯರ್ ಆದಮೇಲೆ ಹೇಳು. I'll arrange for courier service to send the things to your home." ಎಂದು ಹೇಳಿ ತನ್ನ ಕ್ಯಾಬಿನ್ ಕಡೆ ಹೆಜ್ಜೆ ಹಾಕಿದ. ಚಕ್ಕನೆ ಅವನ ಹಿಂದೆ ಹೋದಳು. ಕ್ಯಾಬಿನ್ನಿಗೆ ಹೋದ ಮೇಲೆ, "ಸರ್, sorry for changing the decision. But I'd like to continue working from office." ಎಂದಳು. ಮ್ಯಾನೇಜರ್ ಸ್ವಲ್ಪ ಕೋಪಿಸಿಕೊಂಡರೂ, "It's alright Sangeetha, I understand. Not many can adjust to WFH. Nothing to worry, you can use same desk." ಎಂದು ನಕ್ಕ.
ಸಂಗೀತ ತನ್ನ ಡೆಸ್ಕಿನ ಬಳಿ ಬಂದು, ಕುರ್ಚಿಯಲ್ಲಿ ಕುಳಿತಳು. ಪಕ್ಕದಲ್ಲೇ ಚರಣ! ಹೇಳೋಣ ತನ್ನ ಭಾವನೆಯನ್ನು ಎಂದುಕೊಂಡಾಗ, ಫೋನ್ ರಿಂಗಣಿಸಿತು. ಅಣ್ಣನ ಕಾಲ್ ಬರ್ತಿದೆ. ರಿಸೀವ್ ಮಾಡಿ "ಹಲೋ ಅಣ್ಣ, ಎಲ್ಲಿದ್ದಿಯ? ಪಿಜಿ ಹತ್ತಿರವ.. ಓಕೆ ಓಕೆ. ಒಂದು ಕೆಲಸ ಮಾಡು, ಇಲ್ಲೇ ಆಫೀಸಿಗೆ ಬಂದುಬಿಡು. ನನಗೆ ತುಂಬಾ ಬೇಕಾದ ಹಾಗೂ ಮುಖ್ಯವಾದ ವ್ಯಕ್ತಿಯನ್ನು ಪರಿಚಯ ಮಾಡುವುದಿದೆ." ಎಂದು ಚರಣನಿಗೆ ಕೇಳಿಸುವಂತೆ ಹೇಳಿ ಚರಣನ ಕಡೆ ನೋಡಿದಳು. ಚರಣನಿಗೆ ಅರ್ಥವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅವನಿಗೆ ಉತ್ತರ ಸಿಕ್ಕಿತ್ತು.
Comments
Post a Comment