ಸಂಗೀತದ ಚರಣ
ಭಾಗ ೧ : ಚಿಗುರು ಹೆಸರಿಗೆ ತಕ್ಕಂತೆ ತನ್ನ ಜೀವನವನ್ನು ಸುಮಧುರವಾಗಿ ಇರಿಸಿಕೊಳ್ಳಬೇಕೆಂಬ ಆಶಯವಿಟ್ಟುಕೊಂಡಿದ್ದವಳು ಸಂಗೀತ. ಈಗ ತಾನೇ ಎಂಜಿನಿಯರಿಂಗ್ ಪದವಿ ಮುಗಿಸಿ, ಕ್ಯಾಂಪಸ್ ರೆಕ್ರೂಟ್ಮೆಂಟ್ ಮೂಲಕ ಒಂದು ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದಾಳೆ. ಮೈಸೂರಿನಿಂದ ಬೆಂಗಳೂರಿಗೆ ಬಂದಾಗ, ಅಣ್ಣ ಜೊತೆಯಲಿ ಬಂದು ಒಳ್ಳೆ ಏರಿಯದಲ್ಲಿ ಪಿ.ಜಿ ಮಾಡಿಕೊಟ್ಟು ಕೈಗೆ ಒಂದಷ್ಟು ಸಾವಿರ ಕೊಟ್ಟು ಹೋಗಿದ್ದನು. ಅಪ್ಪನ ಮುದ್ದು ಮಗಳಾಗಿ, ಅಣ್ಣನ ತುಂಟು ತಂಗಿಯಾಗಿ ಇದ್ದ ಅವಳನ್ನು, ಅಮ್ಮನ ಕೊರತೆ ಬರದಿರುವಷ್ಟು ಚೆನ್ನಾಗಿ ನೋಡಿಕೊಂಡಿದ್ದರು. ಅಣ್ಣನಿಗೆ ಆಗಲೇ ಮದುವೆಯ ವಯಸ್ಸು ಮೀರಿದ್ದು ಇನ್ನೂ ಕಾಯುವಂತೆ ಇರಲಿಲ್ಲ. ಇವಳ ಮದುವೆಗೆಂದು ಕಾಯುತ್ತಿದ್ದರು. ಇವಳು ಬೆಂಗಳೂರಿಗೆ ಕೆಲಸಕ್ಕೆ ಹೋಗುವುದಾಗಿ ಹೇಳಿದಾಗ, ಅಪ್ಪ ಮತ್ತು ಅಣ್ಣನಿಗೆ ಇಷ್ಟವಿರಲಿಲ್ಲ. ಆದರೂ, ಭವಿಷ್ಯದ ದೃಷ್ಟಿಯಿಂದಲೂ, ಅವಳು ಸ್ವತಃ ತನ್ನ ಕಾಲಿನ ಮೇಲೆ ನಿಲ್ಲಬೇಕು ಎಂದೂ ಇಬ್ಬರು ಒಪ್ಪಿದ್ದರು. ಮತ್ತು ವರನು ಬೇಗ ಸಿಗಬಹುದು ಎಂಬ ಲೆಕ್ಕಾಚಾರವೂ ಇತ್ತು. ಹೆಬ್ಬಾಳದಲ್ಲಿರುವ ಮಾನ್ಯತಾ ಟೆಕ್ ಪಾರ್ಕಿನಲ್ಲಿ ಒಂದು ಎಂ.ಎನ್.ಸಿ ಯಲ್ಲಿ ಕೆಲಸ. ಕೈ ತುಂಬಾ ಸಂಬಳ. ಸಾಂಸ್ಕೃತಿಕ ನಗರದಿಂದ ಬಂದ ಸಂಗೀತಳಿಗೆ, ಸದಾ ಗಿಜಿಗಿಡುತಿದ್ದ ಮತ್ತು ಬಿಡುವಿಲ್ಲದ ಬೆಂಗಳೂರಿನ ಜೀವನ ಒಗ್ಗುವಷ್ಟರಲ್ಲಿ ಎರಡು ತಿಂಗಳುಗಳ ಕಾಲ ಕಳೆದು ಹೋಯಿತು. ಟೆಕ್ ಪಾರ್ಕಿನ ಎದುರುಗಡೆ ಏರಿಯದಲ್ಲೇ ಪಿ.ಜಿ ಇದ್ದುದ್ದರಿಂದ ಯಾ...