ಮದುವೆಯಲ್ಲಿ ಗೊಡವೆ

ನಮ್ಮ ಎಂಜಿನಿಯರಿಂಗ್ ಕಾಲೇಜಿನ ದಿನಗಳು ಮುಗಿದು, ಸ್ನೇಹಿತರಾಗಿದ್ದ ನಮ್ಮಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಬೇರೆಯಾಗಿದ್ದೆವು. ಒಂದು ಸಾಮೂಹಿಕ ಭೇಟಿಗೆ ಹಾತೊರೆಯುತ್ತಿದ್ದ ಮನಸುಗಳು ನಮ್ಮವಾಗಿದ್ದವು.

ನಮ್ಮ ಸ್ನೇಹಿತನು ಮೈಸೂರಿನಲ್ಲಿ ಆಗುತ್ತಿದ್ದ ಮದುವೆಗೆ ಆಮಂತ್ರಣ ಬಂದಾಗ, ಎಲ್ಲರಲ್ಲೂ ಖುಷಿಯ ನರ್ತನ. ಆಗ ಈಗಿನಂತೆ ವಾಟ್ಸಾಪ್ ಇರಲಿಲ್ಲ. ಎಲ್ಲವೂ ಈಮೇಲ್ ಮತ್ತು ಫೋನಿನ ಮುಖಾಂತರ ಎಲ್ಲರ ಸಂಗಡ ಚರ್ಚೆ ಮಾಡಿ ಒಂದು ದಿನ ಮುಂಚಿತವಾಗಿ ಹೋಗೋಣ ಎಂದು ತೀರ್ಮಾನ ಮಾಡಿದೆವು. ಎಣ್ಣೆ ಪಾರ್ಟಿ ಅಂತ ಕೆಲವರು ಸಿದ್ಧತೆ ಶುರು ಹಚ್ಚಿಕೊಂಡಿದ್ದರು. ಅದೇ ಮದುವೆಯ ಎಣ್ಣೆ ಪಾರ್ಟಿಯಲ್ಲಿ ಒಂದು ನೆನಪಿಡುವಂತಹ ಗೊಡವೆ ನಡೆಸಲು ವಿಧಿ ತಯಾರು ನಡೆಸಿತ್ತು.

ಮೈಸೂರಿನ ವಿದ್ಯಾರಣ್ಯಪುರದಲ್ಲಿರುವ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಮಾಡುವೆ ನಿಶ್ಚಯವಾಗಿತ್ತು. ನಾವೆಲ್ಲರೂ ಹಿಂದಿನ ದಿನವೇ ಹೋಗಿ, ವರನಾದ ಸ್ನೇಹಿತನನ್ನು ಭೇಟಿ ಮಾಡಿ ಒಂದಷ್ಟು ಕಾಲ ಕಳೆದೆವು. ಸಂಜೆಯಾಗುತ್ತಿದ್ದ ಹಾಗೆ, ಬೇರೆ ಊರುಗಳಲ್ಲಿದ್ದ ಮಿಕ್ಕ ಸ್ನೇಹಿತರು ಬಂದರು. ಅಲ್ಲೇ ಕಲ್ಯಾಣ ಮಂಟಪದ ಪಕ್ಕದಲ್ಲಿದ್ದ ಸುಸಜ್ಜಿತವಾದ ರೂಮುಗಳನ್ನು ಬುಕ್ ಮಾಡಿದ್ದೆವು.

ರಾತ್ರಿ ಬೇಗನೆ ಊಟ ಮುಗಿಸಿ, ರೂಮಿಗೆ ಬಂದು, ಮಾತಿನ ಚಟವನ್ನು ಪೂರೈಸಿಕೊಂಡೆವು. ಸುಮಾರು ತಿಂಗಳುಗಳ ಕಾಲ ಯಾರು ಭೇಟಿ ಆಗಿರಲಿಲ್ಲ. ಹಾಗಾಗಿ ಅಂದಿನ ಸಮಯ ನಮಗೆಲ್ಲಾ ಸಂತೋಷ ತರುತಿತ್ತು. ಯಾರು ಏನು ಮಾಡುತ್ತಿದ್ದಾರೆ, ಅವರ ಕಾಲೇಜಿನ ಕ್ರಶ್, ಈಗಿನ ಕ್ರಶ್, ಇತ್ಯಾದಿ ಇತ್ಯಾದಿ ಹರಟೆಗಳಿಗೆ ಮಿತಿಯೇ ಇರಲಿಲ್ಲ. ಮಾತಿನ ಮಧ್ಯ ಎಣ್ಣೆ ಮುಗಿದು ಹೋಗುತ್ತಿದ್ದದ್ದು ಗೊತ್ತಾಗಲಿಲ್ಲ. ಕೊನೆಯಲ್ಲಿ ಎಣ್ಣೆ ಖಾಲಿ ಆಗಿದೆ ಅಂತ ತಿಳಿದಾಗ, ಐದಾರು ಸ್ನೇಹಿತರು ಅಲ್ಲೇ ಹತ್ತಿರದಲ್ಲಿ ಒಂದು ಬಾರಿಗೆ ಹೋಗಿ ಮತ್ತಷ್ಟು ಎಣ್ಣೆ ತರುವೆವು ಎಂದು ಹೋದರು.

ಮಿಕ್ಕ ನಾವುಗಳು ರೂಮಿನಾಚೆ ಮೆಟ್ಟಿಲುಗಳ ಮೇಲೆ ಕುಳಿತು ಮಾತಾಡುತಿದ್ದೆವು. ಅರ್ಧ ಘಂಟೆ ಆದ ನಂತರ ದೂರದಲ್ಲಿ ಕೂಗಾಟ/ಗಲಾಟೆ ಕೇಳಿ ಬಂತು. ನಾವು, ಅಯ್ಯೋ ಈ ಬಾರ್ ಹತ್ತಿರ ಗಲಾಟೆಗಳು ಇದ್ದದ್ದೇ ಎಂದು ಗೊಣಗುತ್ತ ಇದ್ದಂತೆ, ಬೆಂಗಳೂರಿನ ಒಬ್ಬ ಸ್ನೇಹಿತನ ಧ್ವನಿ ಕೇಳಿತು. ಜೋರು ಧ್ವನಿಯಲ್ಲಿ ಬಯ್ಯುತ್ತಾ ಇದ್ದ. ನಾವೆಲ್ಲಾ ಏನಾಯ್ತೋ ಎಂದು ಆ ಕಡೆ ನಡೆದೆವು. ಅಲ್ಲಿ ನೋಡಿದರೆ ನಮ್ಮ ಸ್ನೇಹಿತರು ಮತ್ತು ಇನ್ನೊಂದು ಗುಂಪಿನ ನಡುವೆ ಮಾತಿನ ಚಕಮಕಿ ನಡೆಯುತಿತ್ತು. 

ಹತ್ತಿರ ಹೋಗಿ ಕೇಳಿದಾಗ ಗೊತ್ತಾಗಿದ್ದು ಏನೆಂದರೆ, ನಮ್ಮ ಬೆಂಗಳೂರಿನ ಸ್ನೇಹಿತ ಎಣ್ಣೆ ಏಟಿನಲ್ಲಿ ಭೇಜಾನ್ ಇಂಗ್ಲಿಷ್ ಮಾತಾಡಿದ್ದಾನೆ, ಅದನ್ನು ಕೇಳಿದ ಲೋಕಲ್ ಹುಡುಗರ ತಲೆ ಗಿರ್ ಅಂದು ತಿ# ಉರ್ಕೊಂಡು ಅವನಿಗೆ "ಏನೋ ಮಗನೆ, ಕನ್ನಡದಲ್ಲಿ ಮಾತಾಡೋಕ್ಕೆ ಏನೋ ಕೊಬ್ಬು" ಅಂತ ಅವಾಜ್ ಹಾಕಿದ್ದಾರೆ. ನಮ್ಮವ, ರೊಚ್ಚಿಗೆದ್ದು ಒಂದು ಏಟು ಕೊಟ್ಟವ್ನೆ...ಹಾಗೆ ಎರಡು ಇಸ್ಕೊಂಡವ್ನೆ. ಅಷ್ಟರಲ್ಲಿ ಆ ಗುಂಪಿನವ "ಬನ್ರೋ..ಮಕ್ಕಾಳ, ಇಲ್ಲೇ ರೂಮ್ ಮಾಡಿರೋದ ನೀವು...ಬನ್ನಿ ನಿಮಗೆ ಐತೆ ಗ್ರಹಚಾರ" ಅಂದು ಅಬ್ಬರಿಸಿದ. ಹಾಗೆ ಮಾತಿನ ಗಲಾಟೆಯಲ್ಲಿ ರೂಮಿನ ಬಳಿ ಬಂದು, ಮೆಟ್ಟಿಲ ಹತ್ತಿರ ಎಲ್ಲ ನಿಂತೆವು. 

ನಮ್ಮ ಸ್ನೇಹಿತರಲ್ಲಿ ನಾನು, ಮತ್ತು ಇನ್ನು ಮೂವರು ಮೈಸೂರಿನವರಾದರು ನಮಗೆ ಅಂತ ರೌಡಿಸಂ ಕಾಂಟ್ಯಾಕ್ಟ್ಸ್ ಏನೂ ಇರಲಿಲ್ಲ. ಇದ್ದದ್ದರಲ್ಲಿ ನಾನು ಗಡ್ಡ ಬಿಟ್ಟಿದ್ದ ಕಾರಣ ಸ್ವಲ್ಪ ಒರಟನಾಗಿ ಕಾಣುತ್ತ ಇದ್ದೆ. ನಮ್ಮ ಸ್ನೇಹಿತರೊಲ್ಲಬ್ಬ, ನನ್ನ ಕಡೆ ಕೈ ತೋರಿಸಿ ಗುಂಪಿಗೆ ಹೇಳಿದ "ಇವ್ನು ಕೂಡ ಲೋಕಲ್....ಭಯಾನಕ ಹವಾ ಇಟ್ಟವ್ನೆ" ಅಂದುಬಿಡೋದೆ!

ಆ ಗುಂಪಿನಲ್ಲಿದ್ದವರಲ್ಲಿ ಬಹಳ ಜನ ರೌಡಿಗಳೇ. ಇಬ್ಬರನ್ನು ನೋಡಿದ್ದೆ ಸಹ. ಒಬ್ಬ (ಎಜುಕೇಟೆಡ್ ಅನ್ನಿಸ್ತು, ಆದರೆ ಪೂರಾ ಒರಟ) ನನ್ನ ಕಡೆ ತಿರುಗಿ "ಏನಮ್ಮ...ನೀನ್ ಏನ್ ದೊಡ್ಡ ಲಾರ್ಡ ಇಲ್ಲಿ? ಬಾಳೆಕಾಯಿ ಮಂಡಿ ಮಂಜ ಗೊತ್ತಾ? ಅಶೋಕ್ ಪುರಂ ಸೀನ ಗೊತ್ತಾ? ಮಗನೆ, ಅಡ್ಡಡ್ಡ ಸಿಗಿದು ಬಿಡ್ತೀನಿ. ಯಾವ್ದೋ ನಿನ್ನ ಅಡ್ಡ?" ಅಂತ ಹೆದರಿಸಿದ.

ನಾನೋ, ಮೊದಲೇ ಸಾಫ್ಟ್ ನೇಚರ್ ಮತ್ತು ಸ್ವಲ್ಪ ಪುಕ್ಕಲ. ಏನು ಹೇಳ್ಬೇಕು ಅಂತ ಯೋಚಿಸುತ್ತಿರುವಲ್ಲಿ ಬಾಯಿಂದ ಗೊತ್ತಾಗದೆ ಆಚೆ ಬಂದ ಪದಗಳು :

"ನಂದು ಅಂತ ಯಾವ್ ಅಡ್ಡನೂ ಇಲ್ಲ. ನಾನು ಎಲ್ಲಿ ಹೋಗ್ತಿನೋ ಅಲ್ಲಿರೋ ಅಡ್ಡದಲ್ಲೇ ಕೂರ್ತೀನಿ. ಏನೀಗ?"

ಹೇಳೋದೇನೋ ಹೇಳಿಬಿಟ್ಟೆ...ಕಾಲಿನಲ್ಲಿ ಸಣ್ಣ ನಡುಕ. ತಲೆ ಘಿಮ್ಮ್ ಅಂತಿದೆ. ಕಾಲ ಕೆಳಗೆ ಭೂಮಿ ಇಲ್ವೇನೋ ಅನ್ನೋ ಭಾವನೆ.

ನಾನು ಹೇಳಿದ್ದನ್ನ ಕೇಳಿ, ಆ ಗುಂಪಿನವರೆಲ್ಲ ಗೊಳ್ಳನೆ ನಗಲು ಶುರು ಮಾಡಿದರು. ಹೆಚ್ಚು ಕಡಿಮೆ ಹತ್ತು ನಿಮಿಷ ಸತತವಾಗಿ ನಕ್ಕರು. ಒಬ್ಬ ಮೆಟ್ಟಿಲು ಮೇಲೆಯೇ ಹೊರಳಾಡಿ ನಕ್ಕ.

ನನಗೆ ಹೆದರಿಸಿದವ ಹತ್ತಿರ ಬಂದು "ಶಭಾಷ್ ಮಗ...ಮೀಟರ್ ಇಲ್ಲದೇ ಇದ್ರೂ ಅವಾಜ್ ಹಾಕಿದ್ದ್ಯ. ಬಾ ಜೊತೇಲಿ ಎಣ್ಣೆ ಹೊಡೆಯುವ....ಏ, ಬನ್ರೋ...ಎಲ್ರು" ಅಂತ ಹೇಳಿದ. ನಮ್ಮ ಬೆಂಗಳೂರಿನ ಸ್ನೇಹಿತನಿಗೂ ಕ್ಷಮೆ ಕೇಳಿದರು. 

ಆಮೇಲೆ ರೂಮಿನಲ್ಲಿ ನನ್ನ ಸ್ನೇಹಿತರು ನಗುತ್ತ ಕೀಟಲೆ ಮಾಡಿದರು, "ಏನ್ ಮಾಮ್ಸ್, ನಿನ್ನ ಫೇಸ್ ಕಟ್ ಗೂ, ನಿನ್ನ ವಾಯ್ಸಿಗೂ, ನಿನ್ನ ಅಟಿಟ್ಯೂಡಿಗೂ ಮ್ಯಾಚೇ ಆಗಲ್ಲ"

ಸುಮಾರು ವರ್ಷಗಳ ನಂತರ, ಅದೇ ಮುಖ ಎದುರಾಯಿತು. ಆಗ ಆತ ಡಾಕ್ಟರ್ ಆಗಿದ್ದ. ನಾನು ಅವನಿಗೆ ಈ ಘಟನೆ ಹೇಳಿ ನೆನಪಿಸಿದೆ.

ಅವನು ನಕ್ಕು ನಕ್ಕು ಹೇಳಿದ "ಆ ದಿನಗಳು!"

Comments

Popular posts from this blog

ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

ಮಾದೇಶ್ವರನ ಬರಹ