ದೇವರಿದ್ದಾರಾ?


ಸುಮಾರು ವರ್ಷಗಳ ಹಿಂದೆ ನಡೆದಿದ್ದು. ಒಂದು ಭಾನುವಾರ ನಾನು, ನನ್ನ ಪತ್ನಿ ಹಾಗು ನಮ್ಮ ಆರು ವರ್ಷದ ಮಗ ಬೆಳಗ್ಗೆನೇ ಎದ್ದು, ಹೊಸದಾಗಿ ಕೊಂಡಿದ್ದ ಆಲ್ಟೊ ಕಾರಿನಲ್ಲಿ ಒಂದು ದಿನದ ಪಯಣಕ್ಕೆ ಹೊರಟೆವು. ದಾರಿಯಲ್ಲಿ ಹೋಗುತ್ತಾ, ಎಲ್ಲಿ ಹೋಗೋಣ ಎಂದು ಯೋಚಿಸಿ, ಭೀಮೇಶ್ವರಿ ಜಂಗಲ್ ಲಾಡ್ಜಿಗೆ ಹೋಗೋಣ ಅಂತ ತೀರ್ಮಾನಿಸಿದೆವು. ಮುಂಚಿತವಾಗಿ ಅಲ್ಲಿ ಬುಕ್ ಮಾಡಬೇಕೆಂಬುದು ಅರಿವಿರಲಿಲ್ಲ.

ಈ ತೀರ್ಮಾನ ಕೈಗೊಳ್ಳುವಷ್ಟರಲ್ಲಿ ನಾವಾಗಲೇ ಕನಕಪುರದ ಹತ್ತಿರ ಬಂದಿದ್ದೆವು. ಅಲ್ಲಿ ಒಂದು ಪೆಟ್ರೋಲ್ ಬಂಕಿನಲ್ಲಿ ಪೆಟ್ರೋಲ್ ಹಾಕಿಸಿ, ಅಲ್ಲಿಯೇ ಇದ್ದ ಒಂದು ಹೋಟೆಲಿನಲ್ಲಿ ಇಡ್ಲಿ, ವಡೆ ಮತ್ತು ಉಪ್ಪಿಟ್ಟು ತಿಂದೆವು. ಪುನಃ ರಸ್ತೆಗಿಳಿದ ಕಾರು ಭೀಮೇಶ್ವರಿ ಕಡೆ ಹೊರಟಿತು. 

ಒಂದು ಗ್ರಾಮದ ಹೆಬ್ಬಾಗಿಲಲ್ಲಿ ಒಂದಷ್ಟು ಹುಡುಗರು ನಿಂತು, ಬರುತಿದ್ದ ಎಲ್ಲ ಕಾರುಗಳನ್ನು ನಿಲ್ಲಿಸಿ, ಚಂದ ವಸೂಲಿ ಮಾಡುತ ಇದ್ದರು. ನಮ್ಮನ್ನು ನಿಲ್ಲಿಸಿ, ಇಪ್ಪತ್ತು ರೂಪಾಯಿಗಳ ವಂತಿಕೆ ಪಡೆದು, ಒಂದು ರಸೀತಿ ಕೊಟ್ಟು ಕಳುಹಿಸಿದರು. ಸ್ವಲ್ಪ ಮುಂದೆ ಹೋಗುತ್ತಿದಂಗೆ, ಒಬ್ಬ ತೀರಾ ಮುದುಕನೂ ಅಲ್ಲ, ತೀರಾ ಮಧ್ಯವಯಸ್ಕನೂ ಅಲ್ಲದ ವ್ಯಕ್ತಿ ಕೈ ತೋರಿಸಿ ನಮ್ಮನ್ನು ತಡೆ ಹಿಡಿದನು. ನಾನು ನಿಲ್ಲಿಸಿ, ಕಿಟಕಿಯ ಗಾಜನ್ನು ಕೆಳಗಿಳಿಸಿದೆ.

ಆತ "ನಾನು ಜೊತೆಯಲಿ ಬರುವೆ, ಸ್ವಲ್ಪ ಮುಂದೆ ನನ್ನನ್ನು ಇಳಿಸಿ" ಎಂದು ಕೋರಿದಾಗ, ನಾನು ಮತ್ತು ಪತ್ನಿ, ಇಬ್ಬರೂ ಮುಖ ಮುಖ ನೋಡಿಕೊಂಡು, ಕಣ್ಣಲ್ಲೇ ಮಾತಾಡಿಕೊಂಡೆವು. ಸರಿ ಎಂದು ಅವಳು ಹಿಂದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಮಗನ ಜೊತೆಗೆ ಸೇರಿಕೊಂಡಳು. ಆ ವ್ಯಕ್ತಿ ನನ್ನ ಪಕ್ಕ ಮುಂದಿನ ಸೀಟಿನಲ್ಲಿ ಕುಳಿತ. 

ನಾನು ಅಷ್ಟೊಂದು ವೇಗವಾಗಿ ಓಡಿಸುತ್ತಿರಲಿಲ್ಲ. ಅಬ್ಬಬ್ಬಾ ಅಂದ್ರೆ ಅರವತ್ತರ ಆಸುಪಾಸಿನಲ್ಲಿದ್ದೆ. ಆ ವ್ಯಕ್ತಿ, "ಸಾಮೆರಾ, ನಿಧಾನ ಮಾಡಿ" ಎಂದು ಆಗಾಗ ಕಿರುಕುಳ ಕೊಡ್ತಾ ಇದ್ದ. ನಾನು ಕನ್ನಡಿಯಲ್ಲಿ ನನ್ನ ಪತ್ನಿಯನ್ನು ನೋಡಿ ಮುಸಿನಗುತಿದ್ದೆ.

ಆ ವ್ಯಕ್ತಿ ಇರುವಷ್ಟು ಕಾಲ ಮೂವತ್ತರ ಮೇಲೆ ಹೋಗಲು ಬಿಡಲೇ ಇಲ್ಲ. ಸುಮಾರು ದೂರ ಕ್ರಮಿಸಿದ ಮೇಲೆ, ವ್ಯಕ್ತಿ ತಾನು ಇಳಿದುಕೊಳ್ಳುವುದಾಗಿ ಹೇಳಿದ. ಸರಿ ಎಂದು ಕಾರನ್ನು ನಿಲ್ಲಿಸಿದೆ. ಅಲ್ಲಿಯ ಜಾಗ ನಿರ್ಜನ ಪ್ರದೇಶವಾಗಿದ್ದು ಗೋಚರಿಸಿತು. ಹತ್ತಿರದಲ್ಲೆಲ್ಲೂ ಊರಾಗಲಿ, ಅಂಗಡಿಯಾಗಲಿ, ಏನೂ ಕಾಣಿಸದು. ಅಣತಿ ದೂರದಲ್ಲಿ ಒಂದು ಪಾಳು ಬಿದ್ದಂತೆ ಕಾಣುವ, ಅತಿ ಸಣ್ಣ ಗುಡಿ ಇತ್ತು.  ಮನದಲ್ಲಿ ಸ್ವಲ್ಪ ದಿಗಿಲು. 

ಆ ವ್ಯಕ್ತಿ ನನ್ನ ತೊಡೆ ಸವರಿ, ನಿಧಾನಕ್ಕೆ ಹೋಗಿ ಎಂದು ಇಳಿದುಕೊಂಡ. ಪತ್ನಿ ಮುಂದೆ ಬಂದು ಕೂತಳು. ಮಗ ಹಠ ಮಾಡಿ ನಾನು ಮುಂದೆ ಬರುವೆ ಎಂದ. ಎಷ್ಟೇ ಬೇಡವೆಂದರೂ, ಮುಂದೆ ಕೂರಲೇಬೇಕು ಅಂತ ಅತ್ತಾಗ, ನಾವು ಸುಮ್ಮನಾಗಿ, ಸರಿ ಬಾ , ಕೂರು ಎಂದೆವು. 

ಅಲ್ಲಿಂದ ಕಾರನ್ನು ಸ್ಟಾರ್ಟ್ ಮಾಡಿ ಮುಂದೆ ಹೋಗಲು, ಹಾಗೆ ನಾನು ಕನ್ನಡಿಯಲ್ಲಿ ಆ ವ್ಯಕ್ತಿ ಎಲ್ಲಿ ಹೋಗುತ್ತಾನೆ ನೋಡೋಣ ಎಂದು ನೋಡಿದಾಗ, ಆಶ್ಚರ್ಯ! ವ್ಯಕ್ತಿ ಎಳ್ಳು ಕಾಣಲೇ ಇಲ್ಲ. ಮರೆಯಾಗಿರಬಹುದೇನೋ ಅಂದುಕೊಂಡರೆ ಅಲ್ಲಿ ಪಕ್ಕದಲ್ಲಿ ಯಾವುದೇ ಮರಗಳು ಏನೂ ಇರಲಿಲ್ಲ. ನಮಗೆ ಒಮ್ಮೆಗೆ ದಿಗಿಲು, ಕೂತುಹಲ, ಭಯ ಎಲ್ಲವು ಉಂಟಾದವು. ಇನ್ನು ಅಲ್ಲಿರುವುದು ತರವಲ್ಲ ಎಂದು ಮುಂದೆ ಹೋಗಲು ಶುರು ಮಾಡಿದೆವು. 

ಒಂದು ಹತ್ತು ನಿಮಿಷವಾದ ಮೇಲೆ, ಸ್ವಲ್ಪ ಘಾಟ್ ಇರುವ ರಸ್ತೆ ಶುರುವಾಯಿತು. ಒಂದು ಕಡೆ ತಿರುವಿನಲ್ಲಿ, ಅಚಾನಕ್ಕಾಗಿ ಎದುರು ಕಡೆಯಿಂದ ಟೆಂಪೋ ಟ್ರಾವೆಲ್ಲರ್ ಅತಿ ವೇಗವಾಗಿ ಬಂದಿತು. ನಾನು ಸ್ವಲ್ಪ ಎಡಗಡೆಗೆ ಕಾರನ್ನು ತೆಗೆದುಕೊಂಡೆ. ಅದು ಮಳೆಗಾಲ ಹಾಗು ಶನಿವಾರ ಜೋರಾಗೆ ಮಳೆ ಬಂದಿರಬಹುದು, ರಸ್ತೆಯ ಅಂಚಿನಲ್ಲಿ ಮಣ್ಣು ತನ್ನ ಹಿಡಿತವನ್ನು ಕಳೆದುಕೊಂಡು, ಕಾರಿನ ಟೈರಿಗೆ ಸರಿಯಾದ ಆಧಾರ ಕೊಡಲಿಲ್ಲ. ಎಡದ ಕಡೆ ಚಾನೆಲ್ ಮಾಡುವುದಕ್ಕಾಗಿ ಒಂದೈದು ಅಡಿ ಅಗಲ ಹಾಗು ಒಂದಾರು ಅಡಿ ಆಳ ರಸ್ತೆಯುದ್ದಕ್ಕೂ ಅಗೆದಿದ್ದರು. ನಮ್ಮ ಕಾರು ಹಿಡಿತವಿಲ್ಲದೆ, ಎದುರಿನಲ್ಲಿ ಇದ್ದ ಬೇಲಿಯ ಕಂಬಕ್ಕೆ ಡಿಕ್ಕಿ ಹೊಡೆದು, ಕಲ್ಲಿನ ಕಂಭ ಅರ್ಧಕ್ಕೆ ಮುರಿದು, ಸೀದಾ ನಮ್ಮ ಕಾರಿನ ಮುಂಭಾಗದ ಗಾಜಿಗೆ ಬಡಿಯಿತು. ಗಾಜು ದೊಡ್ಡದಾಗಿ ಬಿರುಕಿತು. ಹಾಗೆ ಕಾರು, ಚಾನ್ನೆಲ್ಲಿನ ಒಳಗೆ ಬಿದ್ದು ಹೋಯಿತು. ಎಡದ ಕಡೆ ಪತ್ನಿ ಮತ್ತು ಅವಳ ತೊಡೆ ಮೇಲೆ ನಮ್ಮ ಮಗ. ಕಾರು ಬೀಳುತ್ತಿದ್ದ ಹಾಗೆ, ನಾನು ಅವರನ್ನು ನೋಡುತ್ತಲೇ ಇದ್ದೆ.ಇವೆಲ್ಲ ಆಗಿದ್ದು ಕೇವಲ ಐದಾರು ಸೆಕೆಂಡುಗಲ್ಲಿ. ಕಾರು ಬಿದ್ದ ತಕ್ಷಣ, ನಾನು ನನ್ನ ಕಡೆಯ ಬಾಗಿಲನ್ನು ಎತ್ತಿ, ಹಿಂದಿನ ಬಾಗಿಲ ಮೇಲೆ ನಿಂತುಕೊಂಡು, ಅವರಿಬ್ಬರನ್ನು ಮೇಲೆ ಎತ್ತಿದೆ. ಮೂವರು ರಸ್ತೆ ಅಂಚಿಗೆ ಬಂದು ನಿಂತೆವು.

ಕೆಲವು ಕ್ಷಣಗಳ ನಂತರ, ಒಂದು ಕಾರು ಬರುತಿದ್ದನ್ನು ಕಂಡು, ಕೈ ತೋರಿಸಿದೆ. ಕಾರು ನಮ್ಮ ಬಳಿ ಬಂದು, ನಿಂತುಕೊಂಡಿತು. ಅದರಲ್ಲಿ ಎರಡು ಜೋಡಿಗಳಿದ್ದವು. ಏನಾಯ್ತು ಅಂತ ವಿಚಾರಿಸಿ, ನಮ್ಮನ್ನು ಅಲ್ಲಿಂದ ಐದು ನಿಮಿಷ ದೊರದಲ್ಲಿದ್ದ ಭೀಮೇಶ್ವರಿ ಕ್ಯಾಂಪಿಗೆ ಕರೆದುಕೊಂಡು ಹೋದರು. ಅವರು ಬುಕ್ ಮಾಡಿದ್ದರಂತೆ. ಅಲ್ಲಿ ನಾವು ಊಟ ಮಾಡಿ ಮುಗಿಸುವಷ್ಟರಲ್ಲಿ ನಮ್ಮ ಆಲ್ಟೊವನ್ನು ರೆಸಾರ್ಟ್ ಕಡೆಯವರು ಜೆಸಿಬಿ ಸಹಾಯದಿಂದ ಮೇಲೆತ್ತಿಸಿ, ಟೋ ಮಾಡಿಸಿಕೊಂಡು ತಂದಿದ್ದರು.

ಸ್ವಲ್ಪ ಹೊತ್ತಿನ ನಂತರ, ಮಾರುತಿ ಸರ್ವಿಸ್ಗೆ ಫೋನ್ ಮಾಡಿ ಆದ ವಿಷಯ ಹೇಳಿದೆನು. ಅವರು ಮುಂದಿನ ದಿನ ಕಾರನ್ನು ಬೆಂಗಳೂರಿಗೆ ತಂದು ರಿಪೇರಿ ಮಾಡಿಕೊಡುವುದಾಗಿ ಹೇಳಿದ ಮೇಲೆ, ರೆಸಾರ್ಟ್ ಅವರು ಅವರ ಪರಿಚಯವಿದ್ದವರಿಗೆ ಫೋನ್ ಮಾಡಿ, ನಮಗೆ ಅಂತ ಒಂದು ಟ್ಯಾಕ್ಸಿ ಬುಕ್ ಮಾಡಿದರು. ಟ್ಯಾಕ್ಸಿ ಬಂದು, ನಮ್ಮನ್ನು ಹತ್ತಿಸಿಕೊಂಡು ರೆಸಾರ್ಟ್ ಬಿಟ್ಟು ಮುಂದೆ ಹೋಯಿತು. ಕೇವಲ ಎರಡು ಕಿಲೋಮೀಟರು ದೂರ  ಕ್ರಮಿಸಿದಾಗ ನಮಗೆ ಕಂಡಿದ್ದು ಎಡದ ಕಡೆ ದೊಡ್ಡ ಕಣಿವೆ! ಹೆಚ್ಚು ಕಡಿಮೆ ಒಂದತ್ತು ಕಿಲೋಮೀಟರು ಉದ್ದದವರೆಗೂ ಹಾಗೆ ಇತ್ತು.

ಆಗ ನನಗೆ ಜ್ಞಾಪಕ ಆಗಿದ್ದು, ಆ ವ್ಯಕ್ತಿ.

ಏನಾದರು ಅವನು ನಮಗೆ ಸಿಕ್ಕಿಲ್ಲವಾಗಿದ್ದರೆ, ನಾವು ಬೇಗನೆ ರೆಸಾರ್ಟಿಗೆ ಬಂದು, ಅಲ್ಲಿ ಮುಂಚಿತವಾಗಿ ಬುಕ್ ಮಾಡದವರಿಗೆ ಪ್ರವೇಶವಿಲ್ಲ ಅನ್ನುವುದನ್ನು ತಿಳಿದು ಹಾಗೆ ಮುಂದೆ ಹೋಗುತಿದ್ದೆವು. ಆಗ ನಮಗೆ ಆ ಟೆಂಪೋ ಟ್ರಾವೆಲ್ಲರ್ ಈ ಕಣಿವೆ ಪ್ರದೇಶದಲ್ಲಿ ಎದುರಾಗುತ್ತಿದ್ದು, ಏನಾದರೂ ಅಲ್ಲಿ ಆದ ಸನ್ನಿವೇಶವೇ ಇಲ್ಲಾಗುತ್ತಿದ್ದರೆ, ನಮ್ಮ ಗತಿ ಏನಾಗುತ್ತಿತ್ತು?

ಇಂದಿಗೂ ಆ ವ್ಯಕ್ತಿ ನಮಗೆ ನಿಗೂಢನಾಗಿದ್ದಾನೆ. ಆತ ದೇವನ? ಶಕ್ತಿಯ? 


Comments

  1. ರೋಮಾಂಚನ ಹುಟ್ಟಿಸಿತು
    Everything happens for reason
    I belive that person that day was meant to save you from greater harm!!🙏
    And nice continue sharing your experiences sir
    It helps

    ReplyDelete
  2. ಅತ್ಯುತ್ತಮವಾದ ಬರಹ 🙏

    ReplyDelete
  3. ವಿಶಿಷ್ಟ ಅನಿಸೋ ಅನುಭವಗಳನ್ನ ಹಂಚಿಕೊಳ್ಬೇಕು. ಅವಾಗ ಖುಷಿ ಇಮ್ಮಡಿಯಾಗತ್ತೆ ಇನ್ನು ಬರಲಿ.

    ReplyDelete
    Replies
    1. Thank you Sir 🙏 ನಿಮ್ಮ ಪ್ರೇರಣೆ,. ಪ್ರೋತ್ಸಾಹ

      Delete

Post a Comment

Popular posts from this blog

ಕಾಲದ ಛಾಯೆಯಲ್ಲಿ ಮರೆಯಾದ ಸಹಾಯದ ಹಸ್ತ

ರೋಬೊ ವಾಕ್ಯೂಮ್ಗಳ ಪ್ರೇಮ ಸೆಳೆತ

ಮಾದೇಶ್ವರನ ಬರಹ